ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಕ್ಷೇತ್ರ ವಿಂಗಡಣೆ ಬಳಿಕ ರಾಜ್ಯ ಸರಕಾರವೀಗ ಮೀಸಲಾತಿ ಘೋಷಿಸಿ ರಾಜ್ಯ ಪತ್ರ ಹೊರಡಿಸಿದೆ
ಮೀಸಲು ಪಟ್ಟಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಜುಲೈ 8ರ ತನಕ ಅವಕಾಶ ನೀಡಲಾಗಿದೆ. ಸರಕಾರದ ಮೀಸಲು ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶವಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಘಟಾನುಘಟಿ ಮುಖಂಡರಿಗೆ ಸ್ಪರ್ಧೆ ಮಾಡಲು ಅವಕಾಶ ಇಲ್ಲವಾಗಿದೆ. ಈ ಬಾರಿಯೂ ಮಹಿಳೆಯರಿಗೆ ಹೆಚ್ಚು ಅವಕಾಶವಿದ್ದು, ನಾಯಕಮಣಿಗಳು ಮಹಿಳೆಯರನ್ನು ಕಣಕ್ಕಿಳಿಸಿ ತೆರೆಮರೆಯ ರಾಜಕೀಯಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಬಹುತೇಕರು ಕ್ಷೇತ್ರ ಕಳೆದುಕೊಂಡಿರುವುದರಿಂದ ನೆರೆಯ ಕ್ಷೇತ್ರಗಳಿಗೆ ವಲಸೆ ಹೋಗಬೇಕಾಗಿದೆ.
ಪ್ರಮುಖವಾಗಿ ಸಚಿವ ಈಶ್ವರಪ್ಪ ಪುತ್ರ ಕಾಂತೇಶ್ ಪ್ರತಿನಿಧಿಸುವ ಹೊಳಲೂರು ಈ ಬಾರಿ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅದೇ ರೀತಿ ಸೋಲಿಲ್ಲದ ಸರದಾರ ಕಲಗೋಡು ರತ್ನಾಕರ್ ಅವರಿಗೂ ಕ್ಷೇತ್ರ ಇಲ್ಲವಾಗಿದೆ. ಆದರೆ ಹಿಂದೆ ಪ್ರತಿನಿಧಿಸಿದ್ದ ರಿಪ್ಪನ್ ಪೇಟೆ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಅಲ್ಲಿ ಮತ್ತೆ ಬಂಡಿರಾಮಚಂದ್ರ ಹಾಗೂ ರತ್ನಾಕರ್ ನಡುವೆ ಟಿಕೆಟ್‍ಗೆ ಪೈಪೋಟಿ ಏರ್ಪಡಲಿದೆ.
ಕುಂಸಿ ಕ್ಷೇತ್ರವು ಬಿಸಿಎಂ(ಬಿ) ಮಹಿಳೆಗೆ ಮೀಸಲಿದ್ದು, ಪ್ರಮುಖ ರಾಜಕೀಯ ನಾಯಕರ ಪತ್ನಿಯನ್ನು ಕಣಕ್ಕಿಳಿಸುವ ಸಲುವಾಗಿಯೇ ಈ ಕ್ಷೇತ್ರದ ಮೀಸಲಾತಿ ಹಾಕಿಕೊಂಡು ಬಂದಂತಿದೆ.
ಇನ್ನು ಹುಂಚ ಕ್ಷೇತ್ರವನ್ನು ಬಿಸಿಎಂ ಎ ಮಹಿಳೆಗೆ ಮೀಸಲಾಗಿದ್ದು, ಶ್ವೇತಾ ಬಂಡಿ ಅವರಿಗೆ ಸ್ಪರ್ಧೆಗೆ ಅವಕಾಶ ಸಿಕ್ಕಿದಂತಾಗಿದೆ. ಪ್ರಮುಖವಾಗಿ ನಗರ ಕ್ಷೇತ್ರವನ್ನು ಎಸ್ಸಿ (ಮಹಿಳೆ)ಗೆ ಮೀಸಲಿಟ್ಟಿದ್ದು, ಸುರೇಶ್ ಸ್ವಾಮಿರಾವ್ ಅವರಿಗೆ ಕ್ಷೇತ್ರ ಇಲ್ಲದಂತಾಗಿದೆ. ಆದರೆ ಅವರು ರಿಪ್ಪನ್ ಪೇಟೆಯತ್ತ ಮುಖ ಮಾಡಬಹುದು. ಹೊಳೆಹೊನ್ನೂರು ಭಾಗದಲ್ಲಿಯೂ ಪ್ರಮುಖ ನಾಯಕರು ಸ್ಪರ್ಧೆಯಿಂದ ವಂಚಿತರಾಗಲಿದ್ದಾರೆ. ಬಿಜೆಪಿ ಪ್ರಮುಖ ನಾಯಕ ಎಂ.ಬಿ.ಭಾನುಪ್ರಕಾಶ್ ಪುತ್ರ ಕಣ್ಣಿಟ್ಟಿದ್ದ ಗಾಜನೂರು ಜಿಲ್ಲಾಪಂಚಾಯಿತಿ ಕ್ಷೇತ್ರವು ಎಸ್ಸಿ ಲೇಡಿಗೆ ಮೀಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಎರಡನೇ ಹಂತದ ಅನೇಕ ನಾಯಕರ ರಾಜಕೀಯ ಓಟಕ್ಕೆ ಬ್ರೇಕ್ ಹಾಕುವ ತಂತ್ರಗಳು ಮೀಸಲಾತಿ ಹಿಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.