ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ -೧೯ ತಡೆ ಲಸಿಕೆ ನೀಡುವಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್ -19 ಎರಡು ಅಲೆಯಲ್ಲಿ ಜನಸಾಮಾನ್ಯರು ಸಿಲುಕಿದ್ದು, ಅದರಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇದರ ನಡುವೆ ಮೂರನೇ ಅಲೆಯ ಆತಂಕವಿದೆ. ಲಸಿಕೆ ನೀಡುವ ಕಾರ್ಯ ತುಂಬಾ ಹಿಂದೆ ಉಳಿದಿದ್ದು, ಲಸಿಕೆ ಹಾಕಿಸಿಕೊಳ್ಳಲು ಪರದಾಡುವಂತಾಗಿದೆ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ಖಾಲಿಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಲಸಿಕೆ ನೀಡುವಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಆರೋಪಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ವಾರದ ಒಂದು ದಿನ ಆರೋಗ್ಯ ಕೇಂದ್ರದ ವ್ಯಾಪ್ತಿಯೊಳಗಿನ ಸಮುದಾಯ ಭವನ ಅಥವಾ ಶಾಲಾ, ಕಾಲೇಜುಗಳಲ್ಲಿ ಲಸಿಕೆ ನೀಡಬೇಕು. ಏಕೆಂದರೆ ಲಸಿಕೆ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿಯೊಬ್ಬರಿಗೂ ಲಸಿಕೆ ಸಿಗುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು18-44ವರ್ಷದೊಳಗಿನ ಎಲ್ಲರಿಗೂ ಜೂನ್ 21ರೊಳಗೆ ಲಸಿಕೆ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಆ ಭರವಸೆ ಹಾಗೆಯೇ ಇವೆ. ಲಸಿಕೆ ಅಭಾವ ಸೃಷ್ಠಿಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸುಲಭವಾಗಿ ಸಿಗುವ ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಏಕೆ ಸಿಗುತ್ತಿಲ್ಲ ಎಂದು ದೂರಿದರಲ್ಲದೇ, ಜಿಲ್ಲೆಯ ಎಲ್ಲರಿಗೂ ಲಸಿಕೆ ನೀಡಬೇಕೆಂದು ಆಗ್ರಹಿಸಿದರು.
ಹೆಚ್. ಪಾಲಾಕ್ಷಿ, ನರಸಿಂಹ ಗಂಧದಮನೆ, ಶ್ಯಾಮ್, ಅನಿಲ್ ಕುಮಾರ್, ಸುಂದರ್, ವಿನಯ್, ಭಾಸ್ಕರ, ನವಿಲೆ ಮಂಜುನಾಥ್, ರಾಜಮ್ಮ, ಶಾಂತಾ ಸುರೇಂದ್ರ, ಕವಿತಾ ಮೊದಲಾದವರಿದ್ದರು.