ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಲ್ಲಿ ಪ್ರಸ್ತುತ ಮುಂಗಾರು ಬೆಳೆಗಳಿಗೆ ಜುಲೈ 5ರಿಂದ ನೀರು ಹರಿಸಲಾಗುತ್ತಿದೆ ಎಂದು ಕಾರ್ಯ ನಿರ್ವಾಹಕ ಇಂಜಿನಿಯರ್ ಸುರೇಶ್ ಬಿ. ತಿಳಿಸಿದ್ದಾರೆ.
ಸಾರ್ವಜನಿಕರು ಹಾಗೂ ರೈತರು ಜನ ಜಾನುವಾರುಗಳೊಂದಿಗೆ ಮುಖ್ಯ ನಾಲೆ ಅಥವಾ ಉಪ ನಾಲೆಗಳಿಗೆ ಇಳಿಯದೆ ಸುರಕ್ಷಿತರಾಗಿರುವಂತೆ ಅವರು ಮನವಿ ಮಾಡಿದ್ದಾರೆ.
ಬಯಲು ನಾಡಿಗೆ ಹರಿವ ತುಂಗೆ
ತುಂಗಾ ಮೇಲ್ದಂಡೆ ಯೋಜನೆ ಬಯಲು ಸೀಮೆಗೆ ನೀರು ಹರಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ದಿ. ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅಡಿಗಲ್ಲು ಹಾಕಿದ್ದ ಯೋಜನೆ ದಶಕಗಳ ಬಳಿಕ ಅನುಷ್ಠಾನಕ್ಕೆ ಬಂದಿತ್ತು. ಈ ಯೋಜನೆಯಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಮತ್ತು ರಾಣೆಬೆನ್ನೂರು, ಮೊಟೆಬೆನ್ನೂರು ಸೇರಿದಂತೆ ಹಾವೇರಿ ಜಿಲ್ಲೆಯ ರೈತರ ಬೆಳೆಗಳಿಗೆ ನೀರುಣಿಸಲಿದ್ದು, ಪ್ರತಿ ಮುಂಗಾರು ಹಂಗಾಮಿನಲ್ಲಿ ಮೇಲ್ದಂಡೆ ಮುಖ್ಯ ಕಾಲುವೆಯಲ್ಲಿ ನೀರು ಹರಿಸಿ ಆ ಜಿಲ್ಲೆಗಳ ಕೆರೆಕಟ್ಟೆಗಳನ್ನು ತುಂಬುವುದಾಗಿದೆ. ಯೋಜನೆಯಿಂದ 12.24 ಟಿಎಂಸಿ ನೀರು ಬಳಕೆಯಾಗಲಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯಿಂದ 94.700 ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿಸಲಾಗುತ್ತದೆ. ಈ ಬಾರಿ ತುಂಗಾ ಡ್ಯಾಂ ಬಹುಬೇಗನೆ ತುಂಬಿದ್ದು, ನಿಗದಿಯಂತೆ ಮೇಲ್ದಂಡೆ ಮುಖ್ಯ ಕಾಲುವೆಯಲ್ಲಿ ನೀರು ಹರಿಸಲಾಗುತ್ತದೆ.