Malenadu Mitra
ರಾಜ್ಯ ಶಿವಮೊಗ್ಗ

ಮಲೆನಾಡಿಗೆ ಜನ ಸಾಗರ, ಜೋಗಕ್ಕೆ ಜೀವಕಳೆ

ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಈಗ ಜೀವಕಳೆ ಮರುಕಳಿಸಿದೆ. ಕಳೆದ ವರ್ಷದಿಂದಲೂ ಪ್ರವಾಸಿಗರ ಬರ ಎದುರಿಸುತ್ತಿದ್ದ ಜೋಗ್ ಫಾಲ್ಸ್ ವೀಕ್ಷಣೆಗೆ ಈಗ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಕೊರೊನಾ ಎರಡನೇ ಆಲೆ ಹಾಗೂ ಲಾಕ್ ಡೌನ್ ಕಾರಣ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಅನ್ ಲಾಕ್ ನಂತರ ಪ್ರವಾಸಿ ತಾಣಗಳಿಗೆ ಪ್ರವೇಶಾವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಜನರು ಪ್ರವಾಸಿತಾಣಗಳತ್ತ ಮುಖಮಾಡಿದ್ದಾರೆ. ಮಳೆಗಾಲ ಎಂದರೆ ಮಲೆನಾಡಿನ ಗಿರಿಶ್ರೇಣಿಗಳು ಹಾಗೂ ಜಲಪಾತಗಳನ್ನು ನೋಡುವುದೇ ಒಂದು ಹಬ್ಬ. ಅದರಂತೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿತಾಣಗಳಿಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರತಾಲೂಕಿನ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರ ಸಿಗಂದೂರು ಚೌಡೇಶ್ವರಿ ದೇವಾಲಯ, ವರದಳ್ಳಿ ಶ್ರೀಧರಾಶ್ರಮ, ಕೆಳದಿ, ಇಕ್ಕೇರಿ, ಕೊಲ್ಲೂರು ಸೇರಿದಂತೆ ಅನೇಕ ದೇವಸ್ಥಾನಗಳತ್ತ ಬರುವ ಪ್ರವಾಸಿಗರು  ಜೋಗ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ.
ಶುಕ್ರವಾರ ಒಂದೇ ದಿನ ಸುಮಾರು ೨ ಸಾವಿರ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ. ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರವೂ ಜನಸಾಗರವೇ ಹರಿದುಬಂದಿದ್ದು, ಮಧ್ಯಾಹ್ನದ ಹೊತ್ತಿಗೇ ೫ ಸಾವಿರ ಪ್ರವಾಸಿಗರು ಆಗಮಿಸಿದ್ದಾರೆ.

ಜಲಪಾತಕ್ಕೆ ಜೀವಕಳೆ

ಮುಂಗಾರು ವಿಳಂಬದ ಕಾರಣ ನೀರಿಲ್ಲದೆ ಸೊರಗಿದ್ದ ಜಲಪಾತಕ್ಕೀಗ ನೀರು ಬರುತ್ತಿದೆ. ಶರಾವತಿ ಕಣಿವೆಯಲ್ಲಿ ಕಳೆದ ನಾಲ್ಕು ದಿನದಿಂದ ಮಳೆಯಾಗುತ್ತಿದ್ದು, ಜಲಪಾತಕ್ಕೂ ಅಲ್ಪಪ್ರಮಾಣದ ನೀರು ಬರುತ್ತಿದೆ. ಮಲೆನಾಡಿನೆ ಬೆಟ್ಟಗುಡ್ಡಗಳ ಸಾಲು ಹಸಿರಿನಿಂದ ಕಂಗೊಳಿಸುತ್ತಿದ್ದು, ನಯನಮನೋಹರವಾಗಿದೆ. ಲಾಕ್ ಡೌನ್ ಕಾರಣದಿಂದ ಹೌಸ್ ಅರೆಸ್ಟ್ ಆಗಿದ್ದ ಜನರು ಮಲೆನಾಡಿನ ಸೊಬಗು ಸವಿಯಲು ಧಾವಿಸುತ್ತಿದ್ದಾರೆ. ಪ್ರವಾಸಿಗರ ದಟ್ಟಣೆಯಿಂದಾಗಿ ಜೋಗದಲ್ಲಿ ವಾಹನ ಪಾರ್ಕಿಂಗ್, ಹೋಟೆಲ್ ಮಯೂರ, ಸಣ್ಣಪುಟ್ಟ ಅಂಗಡಿ, ಮುಂಗಟ್ಟುಗಳು ಜನರಿಂದ ತುಂಬಿ ಹೋಗಿವೆ.

ಸಾಮಾಜಿಕ ಅಂತರದ್ದೇ ಸಮಸ್ಯೆ

ಪ್ರವಾಸಿ ತಾಣಗಳಿಗೆ ಜನರ ಬರುವುದು ಸಹಜ ಮತ್ತು ಬರಬೇಕು ಕೂಡಾ ಆದರೆ ಜನರ ನೂಕು ನುಗ್ಗಲಿನ ಹೊತ್ತಿನಲ್ಲಿ ಸಾಮಾಜಿಕ ಅಂತರ ಕಾಪಾಡುವುದೇ ಸಮಸ್ಯೆಯಾಗಿದೆ. ಮಲೆನಾಡಿನಲ್ಲಿ ಕೊರೊನ ಕಳೆದ ಒಂದು ತಿಂಗಳಿಂದಲೂ ಏರಿಳಿತ ಕಾಣುತ್ತಿದ್ದು, ಜಲಪಾತ ವೀಕ್ಷಿಸುವ ಕಿರಿದಾದ ಪ್ರದೇಶದಲ್ಲಿ ಜನ ಗುಂಪುಗೂಡಾಗುವುದರಿಂದ ಕೊರೊನ ಉಲ್ಬಣವಾಗುವ ಸಾಧ್ಯತೆ ಇದೆ. ಈ ದಿಸೆಯಲ್ಲಿ ಆರೋಗ್ಯ, ಪ್ರವಾಸೋದ್ಯಮ ಹಾಗೂ ರಕ್ಷಣಾ ಇಲಾಖೆ ಗಮನ ಹರಿಸಬೇಕು. ಪ್ರಮುಖವಾಗಿ  ಪ್ರವಾಸಿಗರು ಹಾಗೂ ಪ್ರವಾಸೋದ್ಯಮ ಅವಲಂಭಿಸಿರುವ ವ್ಯಾಪಾರಸ್ಥರು ಈ ನಿಟ್ಟಿನಲ್ಲಿ ಜಾಗೃತಿ ವಹಿಸುವ ಅಗತ್ಯವಿದೆ.  

Ad Widget

Related posts

ಕನ್ನಡ ನಾಡಲ್ಲಿ ಕನ್ನಡಿಗನೇ ಸಾರ್ವಭೌಮ ಕನ್ನಡಕ್ಕೆ ಮೊದಲ ಆದ್ಯತೆ : ಬಿ. ವೈ. ರಾಘವೇಂದ್ರ

Malenadu Mirror Desk

ಸಿದ್ದರಾಮಯ್ಯ ಅಭಿಮಾನಿ ಮಹಿಳೆ ಕೊಲೆ

Malenadu Mirror Desk

ಗ್ರಾಮಾಂತರ ಆಯುಷ್ ಆಸ್ಪತ್ರೆಯಲ್ಲಿ ಸೇವೆ ಮುಂದುವರಿಯಲಿ, ವೈದ್ಯರ ಕರೆಸುವಂತೆ ಕೊಮ್ಮನಾಳು ಗ್ರಾಮಸ್ಥರ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.