ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ಹರಿಸುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಒಕ್ಕೂಟ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತರ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಭದ್ರಾ ಜಲಾಶಯದಲ್ಲಿ ನೀರು ಕಡಿಮೆ ಸಂಗ್ರಹವಾಗಿದೆ. ಜುಲೈ9 ರಂದು ಕೇವಲ 155.9 ಅಡಿ ಮಾತ್ರ ನೀರಿದೆ. ಡೆಡ್ ಸ್ಟೋರೇಜ್, ಬೇಸಿಗೆಗೆ ಕುಡಿಯುವ ನೀರು ಇವೆಲ್ಲವೂ ಸೇರಿದರೆ ಕೇವಲ 28 ದಿನಗಳಿಗಾಗುವಷ್ಟು ಮಾತ್ರ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವುದು ಸೂಕ್ತವಲ್ಲ ಎಂದರು.
ತುಂಗಾ ನದಿಯಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಅಲ್ಲದೇ ಯಥೇಚ್ಛವಾಗಿ ಹರಿದು ಹೋಗುತ್ತಿದೆ. ಇಲ್ಲಿಂದ 17.4 ಟಿಎಂಸಿ ನೀರೆತ್ತುವ ಯೋಜನೆ ವಿಳಂಬವಾಗುತ್ತಿದ್ದು, ಅದನ್ನು ಪೂರ್ಣಗೊಳಿಸಬೇಕು. ಆಗ ಭದ್ರಾ ಜಲಾಶಯದಿಂದ ನೀರು ಹರಿಸುವ ಬಗ್ಗೆ ಯೋಚಿಸಬಹುದಾಗಿದೆ. ಮತ್ತು ಭದ್ರಾ ತುಂಬದ ಹೊರತು ವಾಣಿಗೆ ನೀರು ನೀಡಬಾರದು. ಇಷ್ಟಾಗಿಯೂ ನೀರಾವರಿ ಸಲಹಾ ಸಮಿತಿ ಸಭೆ ಸೇರದೇ ನೀರು ಹರಿಸಲು ಮುಂದಾದರೆ ರೈತರು ಅಸಮಾಧಾನಗೊಂಡು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನೀರು ಬಳಕೆದಾರರ ಒಕ್ಕೂಟ ಮತ್ತು ರೈತ ಸಂಘದ ಮುಖಂಡರಾದ ಅತ್ತಿಗುಂದ ಆರ್. ಶ್ರೀನಿವಾಸ್, ಕೆ. ದೇವೇಂದ್ರಪ್ಪ, ಜಿ.ಎಂ. ಚನ್ನಬಸಪ್ಪ, ಎಸ್. ಶಿವಮೂರ್ತಿ, ಕೆ. ರಾಘವೇಂದ್ರ, ಹೆಚ್.ಎಂ. ಚಂದ್ರಪ್ಪ, ಮಲ್ಲಿಕಾರ್ಜುನ, ದೇವೇಂದ್ರಪ್ಪ ಇದ್ದರು.