ಶಿವಮೊಗ್ಗದ ಅಭಿವೃದ್ಧಿಗೆ ಸರ್ಕಾರ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಾಜಿ ಶಾಸಕರ ವೇದಿಕೆ ರಾಜ್ಯಾಧ್ಯಕ್ಷ ಹೆಚ್.ಎಂ. ಚಂದ್ರಶೇಖರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಅಭಿವೃದ್ಧಿಯಾಗುತ್ತಿರುವುದು ಸಂತಸದ ವಿಷಯವೇ. ಆದರೆ, ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ. ವಿಮಾನ ನಿಲ್ದಾಣ ಬೇಗನೆ ಪೂರ್ಣಗೊಳ್ಳಬೇಕು. ಉದ್ಯಾನವನಗಳ ಅಭಿವೃದ್ಧಿಯಾಗಬೇಕು. ಉದ್ದೇಶಿತ ಬಸವ ಪುತ್ಥಳಿ ಸ್ಥಾಪನೆ ಜೊತೆಗೆ ಅದರ ಸಂರಕ್ಷಣೆ ಭಾರವನ್ನು ಹೊರಬೇಕು. ಶಿವಮೊಗ್ಗದಲ್ಲಿ ಮೆಟ್ರೋ ವ್ಯವಸ್ಥೆ ಜಾರಿಗೆ ತರಬೇಕು. ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದರು.
ಮಹಿಳಾ ಪಾಲಿಟೆಕ್ನಿಕ್ ಕಾಲೇಜ್ ಅನ್ನು ಮೇಲ್ದರ್ಜೆಗೇರಿಸಬೇಕು. ಭದ್ರಾ ಹಾಗೂ ತುಂಗಾ ಜಲಾಶಯಗಳಲ್ಲಿ ಕೆ.ಆರ್.ಎಸ್. ಮಾದರಿಯಲ್ಲಿ ಉದ್ಯಾನವನ ನಿರ್ಮಿಸಬೇಕು. ಇನ್ನೊಂದು ಸರ್ಕಾರಿ ನೌಕರರ ಭವನ ಆಗುತ್ತಿರುವುದು ಸಂತೋಷದ ವಿಷಯವಾಗಿದೆ. ಅದನ್ನು ಸರ್ಕಾರಿ ನೌಕರರಿಗಲ್ಲದೇ ಸಾರ್ವಜನಿಕರಿಗೂ ಮೀಸಲಿಡಬೇಕು ಎಂದರು.
ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಇದು ಅವೈಜ್ಞಾನಿಕ ಪದ್ಧತಿಯಾಗಿದೆ. ಜನರಿಗೆ ಹೊರೆಯಾಗುವುದರಲ್ಲಿ ಅನುಮಾನವಿಲ್ಲ. ಪ್ರತಿ ವರ್ಷ ಏರಿಕೆ ಮಾಡುವುದು ಸರಿಯಲ್ಲ. ಸಾರ್ವಜನಿಕ ಸಂಘ, ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಬೇಕು. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕು. ಏರಿಕೆಯಾಗಿರುವ ಆಸ್ತಿ ತೆರಿಗೆಯನ್ನು ಕೂಡಲೇ ಇಳಿಸಬೇಕು ಎಂದ ಅವರು, ಹುಣಸೋಡು ಸ್ಪೋಟ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕ ಡಾ.ಜಿ.ಡಿ. ನಾರಾಯಣಪ್ಪ ಮಾತನಾಡಿ, ಕೋವಿಡ್ ಮೂರನೇ ಅಲೆಯ ಭಯ ಕಾಡುತ್ತಿದೆ. ಜನರು ಜಾಗೃತರಾಗದ ಹೊರತು ರೋಗ ನಿಯಂತ್ರಣ ಅಸಾಧ್ಯ. ಸರ್ಕಾರ ಎಲ್ಲರಿಗೂ ಲಸಿಕೆ ನೀಡಿ ಇದನ್ನು ನಿಯಂತ್ರಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ ಮಾತನಾಡಿ, ಶಿವಮೊಗ್ಗದಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಮಾಜಿ ಜನಪ್ರತಿನಿಧಿಗಳಿದ್ದಾರೆ. ಅವರೆಲ್ಲರಿಗೂ ಅನುಕೂಲವಾಗುವಂತೆ ಒಂದು ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮತ್ತು ಅನುದಾನ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕೋವಿಡ್ ಮೂರನೇ ಅಲೆಯ ಭಯ ಕಾಡುತ್ತಿದೆ. ಜನರು ಜಾಗೃತರಾಗದ ಹೊರತು ರೋಗ ನಿಯಂತ್ರಣ ಅಸಾಧ್ಯ. ಸರ್ಕಾರ ಎಲ್ಲರಿಗೂ ಲಸಿಕೆ ನೀಡಿ ಇದನ್ನು ನಿಯಂತ್ರಿಸಬೇಕು –ಡಾ.ಜಿ.ಡಿ. ನಾರಾಯಣಪ್ಪ ಮಾಜಿ ಶಾಸಕ