ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಸಚಿವರು ಹಾಗೂ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಕೋವಿಡ್ ಲಸಿಕೆ ಪಡೆಯಲು ಬಂದು ಬರಿಗೈಲಿ ವಾಪಸಾದ ಘಟನೆ ಮಂಗಳವಾರ ನಡೆಯಿತು.
ವಯೋವೃದ್ಧರಾದ ಕಾಗೋಡು ತಿಮ್ಮಪ್ಪ ಅವರು, ತಮ್ಮ ಪ್ರಭಾವ ಬಳಸಿದ್ದರೆ ಮನೆಗೇ ಬಂದು ಲಸಿಕೆ ಹಾಕಿ ಹೋಗುವ ವ್ಯವಸ್ಥೆ ಆಗುತ್ತಿತ್ತು. ಆದರೆ ಕೋವಿಶೀಲ್ದ್ ಎರಡನೇ ಡೋಸ್ ಲಸಿಕೆ ಪಡೆಯಲು ತಿಮ್ಮಪ್ಪ ಅವರು ಸಾಗರ ಅರಸುಭವನಕ್ಕೆ ತೆರಳಿದ್ದರು ಆದರೆ ಅಲ್ಲಿ ಅವರಿಗೆ ಲಸಿಕೆ ಇಲ್ಲ ಎಂಬ ಫಲಕ ಎದುರಾಗಿದೆ. ಈ ಹೊತ್ತಲ್ಲಿ ಯಾವುದೇ ಆಕ್ರೋಶ ಹೊರ ಹಾಕದೆ ಅಲ್ಲಿದ್ದವರ ಆರೋಗ್ಯ, ಕುಶಲೋಪಚಾರ ವಿಚಾರಿಸಿ ಮರಳಿದರು.
ಮನೆಯಿಂದ ದೂರವಾಣಿ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಬಳಿ ಮಂಗಳವಾರ ಲಸಿಕಾ ಅಭಿಯಾನ ಇರುವ ಬಗ್ಗೆ ಮಾಹಿತಿ ಪಡೆದಿದ್ದರಾದರೂ ಅವರು ಬರುವ ಹೊತ್ತಿಗೆ ಲಸಿಕೆ ಇಲ್ಲ ಎಂಬ ಫಲಕ ನೇತಾಡುತಿತ್ತು. ಈ ಸಂದರ್ಭ ಸಾಗರ ತಾಲೂಕಿಗೆ ತಕ್ಷಣಕ್ಕೆ ಎಷ್ಟು ಲಸಿಕೆ ಬೇಕಾಗಬಹುದು ಎಂದು ಮಾಹಿತಿ ಪಡೆದ ಕಾಗೋಡು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿ ಲಸಿಕಾ ಕೇಂದ್ರದಿಂದ ಮನೆಗೆ ಮರಳಿದರು.
ಸರಕಾರ ಲಸಿಕೆ ಕೊರತೆ ಇಲ್ಲ ಎಂದು ಹೇಳುತ್ತಿದ್ದರೂ, ಗ್ರಾಮಾಂತರ ಭಾಗದಲ್ಲಿ 18 ವರ್ಷದ ಮೇಲಿನವರಿಗೆ ಲಸಿಕೆ ಕೊಡುತ್ತಿಲ್ಲ. ಕಾಗೋಡು ತಿಮ್ಮಪ್ಪ ಅವರಂತಹ ಹಿರಿಯರಿಗೇ ಹೀಗಾದರೆ ಸಾಮಾನ್ಯರ ಪರಿಸ್ಥಿತಿ ಹೇಗಾಗಬೇಡ ಹೇಳಿ. ಆದರೆ ಪ್ರಭಾವ ಬಳಸಿದ್ದರೆ ಇದ್ದಲ್ಲಿಗೇ ಬರುತ್ತಿದ್ದ ಲಸಿಕೆಯನ್ನು ಪಡೆಯದೆ ಸಾಮಾನ್ಯರಂತೆ ಲಸಿಕಾ ಕೇಂದ್ರಕ್ಕೇ ಬಂದ ಕಾಗೋಡು ತಿಮ್ಮಪ್ಪ ಅವರ ಮುತ್ಸದ್ದಿತನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅವರು ಮೊದಲ ಡೋಸ್ ಅನ್ನು ಕೂಡಾ ಲಸಿಕಾ ಕೇಂದ್ರಕ್ಕೆ ಬಂದು ಪ್ರಚಾರವಿಲ್ಲದೆ ಪಡೆದಿದ್ದರು