ಈಡಿಗ ಸಮಾಜದ ಸಮಸ್ಯೆ-ಸವಾಲುಗಳ ಚಿಂತನ-ಮಂಥನಕ್ಕೆ ಗಂಗಾವತಿಯಲ್ಲಿ ಪ್ರಮುಖರ ಸಭೆ
ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಈಡಿಗ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದೆ ಉಳಿದಿದೆ. ಈ ಸಮಾಜದ ಅಭಿವೃದ್ಧಿಗೆ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂಬ ಬೇಡಿಕೆಯನ್ನು ಸರಕಾರ ಈಡೇರಿಸದಿದ್ದಲ್ಲಿ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ರಾಣೇಬೆನ್ನೂರಿನ ಶರಣ ಬಸವ ಸಂಸ್ಥಾನದ ಮಠಾಧೀಶರಾದ ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಡಿಗ ಸಮುದಾಯ ಕೃಷಿ ಮತ್ತು ಸೇಂದಿ ಇಳಿಸುವ ಕಾಯಕ ಮಾಡುತಿತ್ತು. ಸರಕಾರ ಸರಾಯಿ ಬ್ಯಾನ್ ಮಾಡಿದ ಮೇಲೆ ಈ ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ. ಹಿಂದೆ ಸಮುದಾಯದ ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವೈನ್‌ಶಾಪ್ ಮತ್ತು ಬಾರ್ ಪರವಾನಗಿಗಳನ್ನು ಆದ್ಯತೆಯ ಮೇಲೆ ನಮ್ಮವರಿಗೆ ನೀಡುತ್ತಿದ್ದರು. ಆದರೆ ಈಗ ಅವುಗಳು ಉಳ್ಳವರ ಪಾಲಾಗುತ್ತಿವೆ. ರಾಜ್ಯದಲ್ಲಿ ದೊಡ್ಡ ಸಂಖ್ಯೆ ಮತ್ತು ಸುಮಾರು ನಾಲ್ಕು ಜಿಲ್ಲೆಯಲ್ಲಿ ಬಹುಸಂಖ್ಯಾತರಾದ ಈಡಿಗ ಸಮುದಾಯದ ೨೬ ಪಂಗಡಗಳ ಅಭಿವೃದ್ಧಿಗೆ ನಿಗಮ ಸ್ಥಾಪಿಸುವ ಅಗತ್ಯವಿದೆ. ಮಸ್ಕಿ ಚುನಾವಣೆ ಸಂದರ್ಭ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದು, ಅವರು ಭರವಸೆ ನೀಡಿದ್ದರು ಆದರೆ ಇನ್ನೂ ಅದೂ ಸಾಧ್ಯವಾಗಿಲ್ಲ ಎಂದು ಸ್ವಾಮೀಜಿ ಹೇಳಿದರು.
ಸಮಾಜದ ಸಂಘಟನೆಗಾಗಿ ಕಲ್ಯಾಣ ಕರ್ನಾಟಕದ ಗಂಗಾವತಿಯ ಹೇಮಗುಡ್ಡದಲ್ಲಿ ಜು.೨೫ ರಂದು ಚಿಂತನಾ ಮಂಥನಾ ಸಭೆ ನಡೆಸಲಾಗುತ್ತಿದೆ. ಈ ಸಂಬಂಧ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಮಾಜಬಾಂದವರಲ್ಲಿ ಅರಿವು ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ ಈಡಿಗ ಸಮಾಜದ ಆರು ಮಠಾಧೀಶರಿದ್ದಾರೆ. ಎಲ್ಲರೂ ಸೇರಿ ಸಮಾಜದ ಸಂಘಟನೆ ಮತ್ತು ಸರಕಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ಪಡೆಯುವಲ್ಲಿ ಮುನ್ನಡೆಯಬೇಕು. ಈ ದಿಸೆಯಲ್ಲಿ ಚರ್ಚಿಸುವ ಸಲುವಾಗಿಯೇ ಸಭೆ ನಡೆಸಲಾಗುತ್ತಿದೆ. ಸಭೆಗೆ ರಾಜ್ಯದಲ್ಲಿ ವಿವಿಧ ಪಕ್ಷ ಪ್ರತಿನಿಧಿಸುವ ಸಮುದಾಯದ ನಾಯಕರು, ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು. ಆರ್ಯ ಈಡಿಗ ಸಮುದಾಯ ರಾಜ್ಯದಲ್ಲಿ ೬೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಕೂಡ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಸಂಘಟನೆ ಬಲವಾಗಿಲ್ಲದಿರುವುದರಿಂದ ರಾಜಕೀಯ ಅಧಿಕಾರವೂ ನಿರೀಕ್ಷಿತ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಈ ಎಲ್ಲದರ ಬಗ್ಗೆಯೂ ಚರ್ಚಿಸುವ ಸಲುವಾಗಿ ಹೇಮಗುಡ್ಡದಲ್ಲಿ ಸಮಾಜದ ಪ್ರಮುಖರ ಸಭೆ ನಡೆಸಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಮುಖಂಡರು ಆಗಮಿಸಲಿದ್ದಾರೆ ಎಂದು ಹೇಳಿದರು. ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಪ್ರಮುಖರಾದ ಎಸ್.ಸಿ.ರಾಮಚಂದ್ರ, ಜಿ.ಡಿ.ಮಂಜುನಾಥ್, ಗೀತಾಂಜಲಿ ದತ್ತಾತ್ರೇಯ, ವೀಣಾ ವೆಂಕಟೇಶ್, ಕೆ.ವೈ.ರಾಮಚಂದ್ರಪ್ಪ, ಸತ್ಯನಾರಾಯಣ್, ಸುಧಾಕರ್ ಮತ್ತಿತರರಿದ್ದರು.
ಡಿಸಿಎಂ ಹುದ್ದೆ ಬೇಕು
ರಾಜ್ಯದಲ್ಲಿ ಏಳು ಜನ ಈಡಿಗ ಸಮುದಾಯದ ಶಾಸಕರಿದ್ದರೂ ಕೇವಲ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ನಾಮ್‌ಕೆವಾಸ್ಥೆ ಸಚಿವ ಸ್ಥಾನ ನೀಡಲಾಗಿದೆ. ನಮ್ಮ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ ಎಂದರು. ಈಗಿನ ಬಿಜೆಪಿ ಸರಕಾರ ಮುಂಬರುವ ದಿನಗಳಲ್ಲಿ ಈಡಿಗ ಸಮಾಜಕ್ಕೆ ಡಿಸಿಎಂ ಹುದ್ದೆ ನೀಡಬೇಕೆಂದು ಶ್ರೀಗಳು ಆಗ್ರಹಿಸಿದರು.
ವಿಮಾನ ನಿಲ್ದಾಣಕ್ಕೆ ಬಂಗಾರಪ್ಪ ಹೆಸರಿಡಲು ಮನವಿ
ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ರಾಜ್ಯ ಕಂಡ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರನ್ನು ನಾಮಕಾರಣ ಮಾಡಬೇಕೆಂದು ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಜಿಲ್ಲಾಧಿಕಾರಿ ಮೂಲಕ ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಜಾತ್ಯತೀತ ನಾಯಕರಾಗಿ ರಾಜಕಾರಣ ಮಾಡಿರುವ ಬಂಗಾರಪ್ಪನವರು ಮುತ್ಸದ್ದಿ ರಾಜಕಾರಣಿಯಾಗಿದ್ದು, ಅವರು ಅಧಿಕಾರಲ್ಲಿದ್ದಾಗ ಜಾರಿಗೆ ತಂದಿದ್ದ ಆಶ್ರಯ, ಆರಾಧನೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಕೃಪಾಂಕ, ರೈತರಿಗೆ ಉಚಿತ ವಿದ್ಯುತ್ ಇಂದಿಗೂ ಚಾಲ್ತಿಯಲ್ಲಿವೆ. ಇವಲ್ಲದೆ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ, ಗಾಜನೂರು ಅಣೆಕಟ್ಟು, ತುಂಗಾ ಮೇಲ್ದಂಡೆ, ಏತ ನೀರಾವರಿ ಯೋಜನೆಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಅವರ ಕೊಡುಗೆಯನ್ನು ಪರಿಗಣಿಸಿ ಅವರ ಹೆಸರನ್ನು ವಿಮಾನ ನಿಲ್ದಣಕ್ಕಿಡಬೇಕೆಂದು ಮನವಿ ಮಾಡಿದರು. ಶ್ರೀ ಪ್ರಣವಾನಂದ ಸ್ವಾಮೀಜಿ, ಈಡಿಗರ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಮುಖಂಡರಾದ ಎಸ್.ಸಿ.ರಾಮಚಂದ್ರ, ಜಿ.ಡಿ.ಮಂಜುನಾಥ್, ಉಮೇಶ್, ಕೆ.ವೈ.ರಾಮಚಂದ್ರಪ್ಪ, ಬೆಳ್ಳೂರು ಸತ್ಯನಾರಾಯಣ್, ಸುಧಾಕರ್ ಶೆಟ್ಟಿಹಳ್ಳಿ ಮತ್ತಿತರರು ಹಾಜರಿದ್ದರು.