Malenadu Mitra
ರಾಜ್ಯ ಶಿವಮೊಗ್ಗ

ಆಸ್ತಿ ತೆರಿಗೆ ಹೆಚ್ಚಳ ಮರುಪರಿಶೀಲನೆಗೆ ನಿರ್ಧಾರ

ಆಸ್ತಿ ತೆರಿಗೆ ಏರಿಕೆ ವಿಚಾರ ಬುಧವಾರ ನಡೆದ ಶಿವಮೊಗ್ಗ ಮಹಾನಗರ ಪಾಲಿಕೆ ಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ಪ್ರತಿಭಟನೆಗೆ ಕಾರಣವಾಗಿದ್ದು, ಪ್ರತಿಪಕ್ಷಗಳ ಬಿಗಿಪಟ್ಟಿಗೆ ಮಣಿದ ಆಡಳಿತ ಪಕ್ಷ ಆದಾಯ ತೆರಿಗೆ ಏರಿಕೆ ನಿರ್ಧಾರವನ್ನು ಪುನರ್ ಪರಿಶೀಲಿಸಲು ಸರಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದೆ.
ಆಯಕ್ತರು ನೀಡಿದ ಈ ಭರವಸೆಯಿಂದ ಪ್ರತಿಪಕ್ಷ ಸದಸ್ಯರು ಪ್ರತಿಭಟನೆಯಿಂದ ಹಿಂದೆ ಸರಿದರು.
ಇದಕ್ಕೂ ಮುನ್ನ ಅವೈಜ್ಞಾನಿಕವಾಗಿ ಏರಿಸಲಾಗಿರುವ ಆಸ್ತಿ ತೆರಿಗೆಯನ್ನು ಇಳಿಸಬೇಕು. ಕೊರೊನಾ ಸಂಕಷ್ಟದ ಕಾಲದಲ್ಲಿ ಜನರಿಗೆ ಆರ್ಥಿಕ ತೊಂದರೆ ಆಗುವಂತೆ ಮಾಡಬಾರದು ಎಂದು ಪ್ರತಿಪಕ್ಷ ಕಾಂಗ್ರೆಸ್‌ನವರು ಆಗ್ರಹಿಸಿದರೂ ಅದಕ್ಕೆ ಸೊಪ್ಪು ಹಾಕದ ಆಡಳಿತ ಪಕ್ಷದ ವರ್ತನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಧಿಕ್ಕಾರ ಹಾಕಿದ ಘಟನೆ ಬುಧವಾರ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಪ್ರತಿಪಕ್ಷ ನಾಯಕಿ ಯಮುನಾ ರಂಗೇಗೌಡ ಈ ವಿಷಯ ಪ್ರಸ್ತಾಪಿಸಿ ಸಬ್ ರಿಜಿಸ್ಟ್ರಾರ್ ದರ(ಎಸ್. ಆರ್.) ಆಧರಿಸಿ ಆಸ್ತಿ ತೆರಿಗೆ ಏರಿಕೆ ಮಾಡಿರುವುದು ಸರಿಯಲ್ಲ. ಈ ಬಗ್ಗೆ ನಗರದಲ್ಲಿ ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೆ ಇದನ್ನು ಹಿಂಪಡೆಯಬೇಕೆಂದರು. ಇದನ್ನು ಬೆಂಬಲಿಸಿ ಮಾತನಾಡಿದ ಸದಸ್ಯ ರಮೇಶ್ ಹೆಗ್ಡೆ, ಪ್ರತಿ ವರ್ಷದ ಹಿಂದಿನ ಸಾಲಿನ ಎಸ್ ಆರ್ ದರ ಆಧರಿಸಿ ಆಸ್ತಿಯ ವಿಸ್ತೀರ್ಣಕ್ಕೆ ಸಂಬಂಧಿಸಿ ಆಸ್ತಿ ಮೌಲ್ಯ ನಿರ್ಧರಿಸಿ ಶೇ. ೫೦ರ ಬದಲಾಗಿ ಶೇ. ೨೫ರಷ್ಟು ತೆರಿಗೆ ಹಾಕಲು ಕಾನೂನು ತಿದ್ದುಪಡಿ ಮಾಡಲಾಗಿದೆ. ೨೦೦-೨೧ನೆಯ ಸಾಲಿನಲ್ಲಿ ಎಸ್. ಆರ್. ದರ ಆಧರಿಸಿ ಶೇ. ೨೫ರಷ್ಟು ಆಸ್ತಿ ದರ ಹೆಚ್ಚಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಇದೇ ರೀತಿ ಏರಿಕೆ ಆಗಲಿದೆ. ತೆರಿಗೆದಾರರು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ ಎಂದು ವಿವರಿಸಿದರು.
ಆದರೆ ಮೇಯರ್ ಮತ್ತು ಆಯುಕ್ತರು ಸರಕಾರದ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳುತ್ತ ದರ ಇಳಿಕೆಯ ಬಗ್ಗೆ ಅನಾಸಕ್ತಿ ತೋರಿಸಿದ್ದರಿಂದ ಪ್ರತಿಭಟಿಸಲು ಕಾಂಗ್ರೆಸ್ ಸದಸ್ಯರು ಮೇಯರ್ ಎದುರು ಧಾವಿಸಿದರು.
ಪ್ಲೆ ಕಾರ್ಡ್ ಹಿಡಿದುಕೊಂಡು ಬಿಜೆಪಿ ವಿರುದ್ದ ಧಿಕ್ಕಾರ ಕೂಗಿದರು. ಬಿಜೆಪಿ ಎಂದರೆ ಟ್ಯಾಕ್ಸ್, ಟ್ಯಾಕ್ಸ್ ಎಂದರೆ ಬಿಜೆಪಿ ಎಂದು ಕೂಗಿದರು. ಆಸ್ತಿ ತೆರಿಗೆ ದರ ಏರಿಕೆ ಬೇಡವೇ ಬೇಡ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದವರು ಸರಕಾರದ ಪರ ಘೋಷಣೆ ಕೂಗಿದರು. ಇದರಿಂದ ಸಭೆ ಕೋಲಾಹಲದಲ್ಲಿ ಸಿಲುಕಿತು. ಗಲಾಟೆಯ ಮಧ್ಯೆ ಯಾರು ಏನು ಮಾತನಾಡಿದರು ಎನ್ನುವುದು ಕೇಳದಂತಾಯಿತು.

ಸುಮಾರು ೨೦ ನಿಮಿಷಗಳ ಕಾಲ ಸದನದ ಬಾವಿಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ ಸ್ವಸ್ಥಾನಕ್ಕೆ ಮರಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಯೋಗೇಶ ಮತ್ತು ಜೆಡಿಎಸ್‌ನ ನಾಗರಾಜ ಕಂಕಾರಿ, ರಾಜ್ಯ ಸರಕಾರದ ಕ್ರಮವನ್ನು ಹಿಗ್ಗಾಮುಗ್ಗಾ ಟೀಕಿಸಿದರು. ಜನರ ಸಮಸ್ಯೆ ಬಗ್ಗೆ ಅರಿವಿಲ್ಲದೆ ತೆರಿಗೆ ವಿಧಿಸಿದ್ದನ್ನು ಸಮರ್ಥಿಸಿಕೊಳ್ಳುತ್ತಿರುವ ಪಾಲಿಕೆ ಸದಸ್ಯರ ವಿರುದ್ದವೂ ಹರಿಹಾಯ್ದರು. ಮಾತಿಗೆ ಮಾತು, ಪ್ರತಿಮಾತುಗಳ, ಘರ್ಷಣೆಯಿಂದ ಇಡೀ ಸಭೆ ಗಲಾಟೆಯಲ್ಲೇ ಮುಳುಗಿತ್ತು.
ಕೊನೆಗೂ ಆಯುಕ್ತರು ಸಮಜಾಯಿಸಿ ನೀಡಿ, ಸರಕಾರದ ತೆರಿಗೆ ಬಗ್ಗೆ ಮಾಹಿತಿ ನೀಡಿದರು. ಆದರೂ ಕಾಂಗ್ರೆಸ್ ಸದಸ್ಯರು ಒಪ್ಪದೆ ತೆರಿಗೆ ಇಳಿಕೆ ಮಾಡಲೇಬೇಕೆಂದು ಹಠ ಹಿಡಿದರು.
ಕೊನೆಗೆ, ತೆರಿಗೆ ಏರಿಕೆಗೆ ತಮ್ಮ ವಿರೋಧವಿರುವುದನ್ನು ನಿರ್ಣಯ ಮಾಡಲು ಕಾಂಗ್ರೆಸಿಗರು ಆಗ್ರಹಿಸಿದರು. ಆಗ ಮತ್ತೆ ಮಾತಿನ ಚಕಮಕಿ ನಡೆಯಿತು. ಕೊನೆಯವರೆಗೂ ಆಸ್ತಿ ತೆರಿಗೆ ವಿರುದ್ಧ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿ, ಸಾರ್ವಜನಿಕ ವಲಯದ ಆಗ್ರಹಕ್ಕೂ ಮನ್ನಣೆ ಕೊಡದ ಬಿಜೆಪಿ ಕ್ರಮವನ್ನು ಖಂಡಿಸಿದರು.
ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಆಯುಕ್ತ ಚಿದಾನಂದ ವಟಾರೆ ಹಾಜರಿದ್ದರು.

ಚೆನ್ನಬಸಪ್ಪ ವಿರುದ್ದ ಆಕ್ರೋಶ

ಕಾಂಗ್ರೆಸ್‌ನವರು ತೆರಿಗೆ ಕಟ್ಟಬೇಡಿ ಎಂದು ಸಾರ್ವಜನಿಕರಿಗೆ ಹೇಳುತ್ತಿದ್ದಾರೆಂದು ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಹೇಳಿದ ಮಾತು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಇದನ್ನು ಎಲ್ಲಾ ಕಾಂಗ್ರೆಸ್ ಸದಸ್ಯರು ಏಕಕಂಠದಿಂದ ವಿರೋಧಿಸಿದರಲ್ಲದೆ, ಚೆನ್ನಬಸಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸುಳ್ಳು ಹೇಳಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ಮಾಡಬೇಡಿ. ಬಿಜೆಪಿಯ ತೆರಿಗೆ ಏರಿಕೆಯನ್ನು ಖಂಡಿಸಿದ್ದೇವೆಯೇ ವಿನಾ ತೆರಿಗೆ ಕಟ್ಟಬೇಡಿ ಎಂದು ಎಲ್ಲಿಯೂ ಹೇಳಿಲ್ಲ. ತೆರಿಗೆಯಿಂದಲೇ ಅಭಿವೃದ್ಧಿ ಕೆಲಸ ಎನ್ನುವುದು ನಮಗೂ ಗೊತ್ತು. ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ ಎಂದು ಯೋಗೇಶ, ರಮೇಶ ಹೆಗ್ಡೆ ಚೆನ್ನಬಸಪ್ಪ ಅವರಿಗೆ ಎದುರೇಟು ನೀಡಿದರು.

ಸುಳ್ಳು ಹೇಳಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ಮಾಡಬೇಡಿ. ಬಿಜೆಪಿಯ ತೆರಿಗೆ ಏರಿಕೆಯನ್ನು ಖಂಡಿಸಿದ್ದೇವೆಯೇ ವಿನಾ ತೆರಿಗೆ ಕಟ್ಟಬೇಡಿ ಎಂದು ಎಲ್ಲಿಯೂ ಹೇಳಿಲ್ಲ– ಯೋಗೇಶ, ರಮೇಶ ಹೆಗ್ಡೆ

Ad Widget

Related posts

ಮಲೆನಾಡಿನ ಕುತೂಹಲ ಇನ್ನೂ ಉಳಿದಿದೆ,ಬೀಳ್ಕೊಡುಗೆ ಸಮಾರಂಭದಲ್ಲಿ ವಾರ್ತಾಧಿಕಾರಿ ಶಫಿ ಹೇಳಿಕೆ

Malenadu Mirror Desk

ಹುಣಸೋಡಿಗೆ ಸ್ಫೋಟಕ ಪೂರೈಕೆದಾರರ ಬಂಧನ

Malenadu Mirror Desk

ಸಿಗಂದೂರಲ್ಲಿ ಶರನ್ನವರಾತ್ರಿ ಉತ್ಸವ ಆರಂಭ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.