ಅರ್ಜಿ ಕೊಟ್ಟವರೇ ದಶಕಗಳ ಕಾಲ ಭೂ ಮಂಜೂರಾತಿಗೆ ಕಾಯುತ್ತಿರುವಾಗ ಅರ್ಜಿ ಹಾಕದೇನೆಬಗರ್ ಹುಕುಂ ಸಾಗುವಳಿಗೆ ಹಕ್ಕು ಪತ್ರ ಪಡೆದಿದ್ದಾರೆ. ಇದು ಸಾಗರ ತಾಲೂಕಿನ ಶುಂಠಿಕೊಪ್ಪ ಗ್ರಾಮದಲ್ಲಿ ಬಗರ್ ಹುಕುಂ ಮಂಜುರಾತಿ ವಿಚಾರದಲ್ಲಿ ನಡೆದಿರುವ ಅವ್ಯವಹಾರ ಖುದ್ದು ಆಡಳಿತ ಪಕ್ಷದ ಶಾಸಕರೇ ಇದನ್ನು ಬಹಿರಂಗಪಡಿಸಿದ್ದಾರೆ.
ಗ್ರಾಮದ ಬಗರ್ ಹುಕುಂ ಸಾಗುವಳಿದಾರರಿಗೆ 12 ನಕಲಿ ಹಕ್ಕುಪತ್ರ ನೀಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಸಲು ಬಗರ್ ಹುಕುಂ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಸಾಗರ ತಾಲ್ಲೂಕು ಕಛೇರಿಯಲ್ಲಿ ತಾಳಗುಪ್ಪ ಹೋಬಳಿಯ ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಬಗ್ಗೆ ಸಭೆ ನಡೆಸಿದ ಶಾಸಕ ಕುಮಾರ್ ಬಂಗಾರಪ್ಪ, ಬಗರ್ ಹುಕುಂ ಮಂಜೂರಾತಿಗೆ ಅರ್ಜಿ ಸಲ್ಲಿಸದೇ ಇರುವವರಿಗೆ ನಕಲಿ ಹಕ್ಕು ಪತ್ರ ಸೃಷ್ಟಿಸಿ ಹಂಚಿಕೆ ಮಾಡಲಾಗಿದೆ. ಇದರ ಬಗ್ಗೆ ತನಿಖೆಯಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದಿದ್ದಾರೆ.
ತಾಳಗುಪ್ಪ ಹೋಬಳಿ ವ್ಯಾಪ್ತಿಯಲ್ಲಿ ಯಾವುದೇ ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಇಲ್ಲ ಎಂದು ಹಿಂದಿನ ಸಮಿತಿ ತೀರ್ಮಾನಿಸಿತ್ತು. ಆದರೆ ವಿಲೇವಾರಿಗಾಗಿ 1039 ಅರ್ಜಿಗಳು ಬಾಕಿ ಉಳಿದಿದೆ. ಕೋವಿಡ್ ಕಾರಣಕ್ಕೆ ಸಮಿತಿ ಸಭೆ ನಡೆಯದೆ ವಿಳಂಬವಾಗಿದೆ. ಅರ್ಜಿಗಳ ವಿಲೇವಾರಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಭೂ ಕಂದಾಯ ಅಧಿನಿಯಮ ಕಲಂ 94 ಸಿ ಪ್ರಕಾರ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ವಿತರಿಸುವ ಸಂಬಂಧ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ಆದೇಶದಂತೆ ಗ್ರಾಮದ ವ್ಯಾಪ್ತಿಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಮನೆ ನಿರ್ಮಿಸಿಕೊಂಡಿದ್ದರೂ, ಗ್ರಾಮದ ಹೆಸರು ಜೋಡಣೆಮಾಡಿ, ಹಕ್ಕುಪತ್ರ ನೀಡುವ ಅವಕಾಶವಿದೆ. ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.
ಕರಡು ಮೀಸಲು: ಸರಕಾರದ ಹಸ್ತಕ್ಷೇಪವಿಲ್ಲ
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮೀಸಲಾತಿ ಬಗ್ಗೆ ಪ್ರತಿಕ್ರೀಯಿಸಿದ ಕುಮಾರ್ ಬಂಗಾರಪ್ಪ, ಮೀಸಲಾತಿಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ.ರೋಸ್ಟರ್ ಪದ್ದತಿ ಅನುಸರಿಸಿ ಮೀಸಲಾತಿ ನಿಗದಿಯಾಗುತ್ತದೆ. ಇದು ಆಯೋಗಕ್ಕೆ ಸಂಬಂಧಿಸಿದ್ದು, ಆಕ್ಷೇಪಣೆಗಳನ್ನೂ ಆಹ್ವಾನಿಸಲಾಗಿತ್ತು ಈ ವಿಚಾರದಲ್ಲಿ ಶಾಸಕರುಗಳ ಪಾತ್ರವೂ ಇಲ್ಲ ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.