ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ನಕಲಿ. ಅವರು ಹಾಗೆ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಪಕ್ಷ ಹೇಳಿದರೆ ನಾನು ರಾಜೀನಾಮೆ ನೀಡಲು ಸಿದ್ಧ. ಸಚಿವ ಸ್ಥಾನ ಹೋದರೆ ಗೂಟ ಹೋದಂತೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರದ್ದೆನ್ನಲಾದ ಆಡಿಯೋ ಬಹಿರಂಗ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಂಘಟನೆ ನನ್ನನ್ನು ಬೆಳೆಸಿದೆ. ಪಕ್ಷ ನನಗೆ ಎಲ್ಲ ಸ್ಥಾನ ಮಾನ ನೀಡಿದೆ. ಸಂಕಷ್ಟದ ಸಮಯದಲ್ಲಿ ಪಕ್ಷದ ಸಂಘಟನೆ ಮಾಡುವುದು ಹೇಗೆ ಎಂಬುದನ್ನು ಮತ್ತು ಸಂಘಟನೆ ಬಗ್ಗೆ ಗಮನಹರಿಸಲು ನನಗೆ ಸಂಘಟನೆ ಹೇಳಿಕೊಟ್ಟಿದೆ. ಜೀವ ಇರುವ ತನಕ ಅಧಿಕಾರವೆಂಬ ಗೂಟಕ್ಕೆ ಅಂಟಿಕೊಳ್ಳದೇ ಹಿಂದು ಸಮಾಜ ಹಾಗೂ ಪಕ್ಷದ ಜೊತೆ ಇರುತ್ತೇನೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವೈರಲ್ ಆಡಿಯೋ ಬಗ್ಗೆ ಈಗಾಗಲೇ ಅವರು ಸ್ಪಷ್ಠೀಕರಣ ನೀಡಿದ್ದು, ಅದು ತನ್ನ ಧ್ವನಿ ಅಲ್ಲವೆಂದು ಹೇಳಿದ್ದಾರೆ. ಹಾಗೂ ಮುಖ್ಯಮಂತ್ರಿಗಳಿಗೆ ಈ ಆಡಿಯೋ ಬಗ್ಗೆ ತನಿಖೆ ನಡೆಸಲು ಕೂಡ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಅದು ಅವರ ಧ್ವನಿ ಹೌದು ಅಥವಾ ಅಲ್ಲ ಎಂದು ಯಾರಾದರೂ ಈ ಬಗ್ಗೆ ತನಿಖೆ ಆಗಬೇಕೆಂದು ಬಯಸಿದರೆ ಅದರ ಬಗ್ಗೆಯೂ ತನಿಖೆಯಾಗಲಿ. ನಾನು ಪಕ್ಷದ ಅಧ್ಯಕ್ಷರ ಪರ ನಿಲ್ಲುತ್ತೇನೆ. ಕಟೀಲ್ ಅವರು ಸಂಘಟನೆಯ ಪ್ರಚಾರಕರಾಗಿ ಕೆಲಸ ಮಾಡಿ ಬಂದವರು. ನಾನದನ್ನು ಹೇಳಿಲ್ಲ. ಯಾರೋ ಹುಚ್ಚರು ಮಾಡಿರುವುದು ಎಂದು ಕಟೀಲ್ ಹೇಳಿದ್ದಾರೆ. ಅವರು ಈ ರೀತಿಯ ಹೇಳಿಕೆ ನೀಡಲು ಸಾಧ್ಯವೇ ಇಲ್ಲ ಎಂದು ಕಟೀಲ್ ಪರವಾಗಿ ಬ್ಯಾಟಿಂಗ್ ಮಾಡಿದರು.
ಈ ವಿಚಾರದಲ್ಲಿ ನಳೀನ್ ಕುಮಾರ್ ಅವರನ್ನು ಬಲಿಪಶು ಮಾಡುವುದು ಬೇಡ. ಯಾರೋ ಹುಚ್ಚ ಈ ರೀತಿ ಮಾತನಾಡಿದರೆ, ನಾನು ಅದಕ್ಕೆ ಉತ್ತರ ಕೊಡುತ್ತಾ ಕೂರಲಾ ಎಂದು ಪ್ರಶ್ನೆ ಮಾಡಿದರಲ್ಲದೇ, ಇದರ ಬಗ್ಗೆ ಆಸಕ್ತಿ ಇಟ್ಟುಕೊಂಡು ನಾನು ರಾಜಕೀಯದಲ್ಲಿಲ್ಲ. ಮಂತ್ರಿ ಸ್ಥಾನ ಹೋದರೆ, ಗೂಟ ಹೋದ ಹಾಗೆ. ಇನ್ನೊಂದು ಪದ ಬಳಸಲು ನನಗೆ ಇಷ್ಟವಿಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದರು
ಕುಮಾರಸ್ವಾಮಿ ಕ್ಷುಲ್ಲಕ ಹೇಳಿಕೆ
ಮಾಜಿ ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪನವರು ದೆಹಲಿಗೆ ತೆರಳುವಾಗ ತಮ್ಮೊಂದಿಗೆ ೬ ಬ್ಯಾಗ್ ಹೊಯ್ದಿದ್ದರು ಎಂದು ಬೇಜವಾಬ್ದಾರಿ ಕ್ಷುಲ್ಲಕ ಹೇಳಿಕೆ ನೀಡಿದ್ದಾರೆ. ಏನನ್ನೋ ಪೂರೈಸಿ ಮೋದಿಯವರನ್ನು ತೃಪ್ತಿ ಮಾಡುವ ಲೆವೆಲ್ ನಲ್ಲಿ ಯಡಿಯೂರಪ್ಪನವರು ಇಲ್ಲ. ಏನನ್ನೋ ಪಡೆದು ನಡೆಯುವಷ್ಟು ಕೆಳಮಟ್ಟದಲ್ಲಿ ಮೋದಿಯವರೂ ಇಲ್ಲ. ವಾಸ್ತವವಾಗಿ ರಾಜ್ಯಕ್ಕೆ ನಾಲ್ಕು ಸಚಿವ ಸ್ಥಾನ ನೀಡಿದ ಕೇಂದ್ರ ಸರ್ಕಾರಕ್ಕೆ ಪಕ್ಷಬೇಧ ಮರೆತು ಅಭಿನಂದಿಸಬೇಕಾಗಿತ್ತು. ದೇವೇಗೌಡರು ಪ್ರಧಾನಿಯಾಗಿದ್ದಾಗ, ಹಾಗಾದರೆ ಅಭಿನಂದಿಸಲು ಸೂಟ್ ಕೇಸ್ ನಲ್ಲಿ ತೆಗೆದುಕೊಂಡು ಹೋದ ಸಾಮಗ್ರಿಗಳನ್ನು ಏನೆಂದು ಭಾವಿಸಬೇಕು ಎಂದು ತಿರುಗೇಟು ನೀಡಿ, ಕುಮಾರಸ್ವಾಮಿ ಅವರ ಹೇಳಿಕೆ ಹಿಂಪಡೆದು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದರು.