Malenadu Mitra
ಶಿವಮೊಗ್ಗ

ಪತ್ರಕರ್ತರು ಸುದ್ದಿ ನೈಜತೆಗೆ ಮೋಸವಾಗದಂತೆ ಜಾಗೃತೆವಹಿಸಬೇಕು

ಪತ್ರಿಕೋದ್ಯಮದಲ್ಲಿ ಮಾನವೀಯ ಸ್ಪರ್ಶವಿಲ್ಲ: ಪತ್ರಕರ್ತ ಸಿ.ರುದ್ರಪ್ಪ ವಿಷಾದ

ಆಧುನಿಕ ಪತ್ರಿಕೋದ್ಯಮದಲ್ಲಿ ಮಾನವೀಯ ಸ್ಪರ್ಶ ಕಡಿಮೆಯಾಗುತ್ತಿದೆ. ತಾಂತ್ರಿಕತೆಯೊಂದಿಗೆ ಓಡುವ ಪತ್ರಕರ್ತರು ಸುದ್ದಿ ನೈಜತೆಗೆ ಮೋಸವಾಗದಂತೆ ಜಾಗೃತೆವಹಿಸಬೇಕು ಎಂದು ಹಿರಿಯ ಪತ್ರಕರ್ತ ಸಿ.ರುದ್ರಪ್ಪ ಹೇಳಿದರು.
ಅವರು ಶಿವಮೊಗ್ಗ,ನಗರದ ಪತ್ರಿಕಾಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುದ್ದಿಯನ್ನು ಹುಡುಕಿಕೊಂಡು ಹೋಗಿ ಸುದ್ದಿ ಮಾಡುವುದು ಸಹಜ ಪತ್ರಿಕೋದ್ಯಮ. ಕಾಲಕ್ಕೆ ತಕ್ಕಂತೆ ಪತ್ರಕರ್ತರು ಅಪ್ ಡೇಟ್ ಆಗಬೇಕು. ಡಿಜಿಟಲ್ ಟೆಕ್ನಾಲಜಿ ತುಂಬಾ ಫಾಸ್ಟ್ ಆಗಿ ಬೆಳೆಯುತ್ತಿದೆ. ಮುಂದೆ ಇನ್ನೂ ಹೊಸ ಆವಿಷ್ಕಾರಗಳಾಗಬಹುದು ಎಲ್ಲವನ್ನೂ ಎದುರಿಸಲು ಪತ್ರಕರ್ತ ಸಿದ್ಧನಾಗಿರಬೇಕು ಎಂದು ರುದ್ರಪ್ಪ ಹೇಳಿದರು.

ವಿಶಿಷ್ಟ ಗೌರವ
ಶಿವಮೊಗ್ಗ ಹೋರಾಟಗಳ ತವರೂರು ಇಲ್ಲಿನ ಪತ್ರಕರ್ತರು ಈ ಎಲ್ಲಾ ಹೋರಾಟಗಳಿಗೆ ಬಲ ತುಂಬಿದ್ದಾರೆ. ಈ ಕಾರಣದಿಂದ ಇಲ್ಲಿನ ಪತ್ರಕರ್ತರಿಗೆ ಹೊರಗಿನ ಜಿಲ್ಲೆಗಳಲ್ಲಿ ವಿಶಿಷ್ಟ ಗೌರವ ಇದೆ. ಸಾಮಾಜಿಕ ಸಮಸ್ಯೆಗಳತ್ತ ಪತ್ರಕರ್ತರು ಸ್ವಯಂ ಪ್ರೇರಿತರಾಗಿ ಹೋಗಿ ಸುದ್ದಿ ಮಾಡಬೇಕು. ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಶಿವಮೊಗ್ಗದಲ್ಲಿ ಈ ಪರಿಪಾಠ ಇತ್ತು. ಇಂದು ಪತ್ರಿಕೋದ್ಯಮ ತನ್ನ ಆಯಾಮ ಬದಲಿಸಿದೆ. ಮಾಲೀಕರ ಮರ್ಜಿಗೆ ವೃತ್ತಿ ನಡೆಯುತ್ತಿದೆ. ಕೊರೊನದಂತಹ ಸಂಕಷ್ಟದ ಕಾಲದಲ್ಲಿ ಪತ್ರಿಕೆಗಳನ್ನು ನಡೆಸುವುದು ಕಷ್ಟದ ಕೆಲಸವಾಗಿದೆ ಎಂದು ಅವರು ಹೇಳಿದರು.
ಪತ್ರಕರ್ತ ಯಾವತ್ತೂ ಸುದ್ದಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ರಾಜಕಾರಣಿಗಳು ಮತ್ತು ಅಧಿಕಾರಿಗಳೊಂದಿಗೆ ಪತ್ರಕರ್ತರಿಗೆ ಸಂಪರ್ಕ ಇರಬೇಕು. ಆದರೆ ಸಂಬಂಧ ಇರಬಾರದು. ಸಮಾಜದ ಕೊಳೆಯನ್ನ ತೊಳೆಯುವ ಪತ್ರಕರ್ತರು ಆ ಕೊಳೆ ಮೈಗಂಟದಂತೆ ನೋಡಿಕೊಳ್ಳಬೇಕು. ಪತ್ರಕರ್ತ ಶೋಷಿತರ ಪರವಾಗಿದ್ದಾಗ ಮಾತ್ರ ವೃತ್ತಿಯ ಘನತೆ ಹೆಚ್ಚುತ್ತದೆ ಎಂದು ರುದ್ರಪ್ಪ ಅಭಿಪ್ರಾಯಪಟ್ಟರು.

ಪ್ರೆಸ್ ಟ್ರಸ್ಟ್ ನ ಅಧ್ಯಕ್ಷ ಎನ್ ಮಂಜುನಾಥ್ ಮಾತನಾಡಿ, ಪತ್ರಿಕಾರಂಗಕ್ಕೆ ಉದ್ಯಮಿಗಳ ಆಗಮನವಾಗುತ್ತಿದ್ದರಿಂದ ಕಾವಲುಗಾರನಾಗಬೇಕಿದ್ದ ಪತ್ರಕರ್ತ ಉಳ್ಳವರ ಹಿತಾಸಕ್ತಿಗೆ ಒಳಗಾಗುತ್ತಿದ್ದಾನೆ. ಹಿಂದಿನಂತೆ ಈಗಿನ ಪತ್ರಕರ್ತರಲ್ಲಿ ಬದ್ಧತೆಯ ಕೊರತೆ ಮತ್ತು ಅಧ್ಯಯನದ ಕೊರತೆ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಮಾತನಾಡಿ, ವೃತ್ತಿಯ ದುರ್ಬಳಕೆಯಾಗುವುದನ್ನು ತಡೆಯಬೇಕು. ಮಾಧ್ಯಮದ ಹೆಸರಲ್ಲಿ ಅನಾಚಾರಗಳು ನಡೆಯದಂತೆ ಪತ್ರಿಕಾ ಸಂಘಟನೆಗಳು ಎಚ್ಚರಿಕೆ ವಹಿಸಬೇಕು. ಸಣ್ಣಪತ್ರಿಕೆಗಳ ಮಾಲೀಕರೂ ಇಂದು ಕಷ್ದಲ್ಲಿದ್ದಾರೆ. ಆದರೆ ಬಂಡವಾಳವಿಲ್ಲದೆ ಪತ್ರಿಕೆ ಮಾಡುವವರು ಸಮಾಜದಲ್ಲಿ ಹೈಲೈಟ್ ಆಗುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಸಮಿತಿ ಸದಸ್ಯ ಟೆಲೆಕ್ಸ್ ರವಿ ಮಾತನಾಡಿ, 1975 ರಲ್ಲಿ ತುರ್ತುಪರಿಸ್ಥಿಯ ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪತ್ರಿಕಾರಂಗದ ಮೇಲೆ ಗದಾಪ್ರಹಾರವೇ ಆಗುತ್ತಿದೆ. 2020 ರಲ್ಲಿ 30 ಜನ ಪತ್ರಕರ್ತರು ಕೊಲೆಯಾಗಿದ್ದಾರೆ. 36 ಜನ ಪತ್ರಕರ್ತರ ಮೇಲೆ ಕೊಲೆ ಪ್ರಯತ್ನ ನಡೆದಿz. ನೂರಕ್ಕೂ ಹೆಚ್ಚು ಪತ್ರಕರ್ತರನ್ನು ಜೈಲಿಗೆ ಹಾಕಲಾಗಿದೆ ಎಂದು ಹೇಳಿದರು.

ಉದ್ಯಮವನ್ನು ನೆಲ ಕಚ್ಚುವಂತೆ ಮಾಡಿದೆ
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾರಂಗ ಇಂದು ಉದ್ಯಮವಾಗಿ ಬೆಳೆದಿದೆ. ಇಲ್ಲಿ ಮಾರುಕಟ್ಟೆಯ ಎಲ್ಲಾ ಸವಾಲುಗಳನ್ನು ಎದುರಿಸಿ ರಂಗ ಬೆಳೆಯಬೇಕಿದೆ. ಆರ್ಥಿಕ ಸಂಕಷ್ಟ ಮತ್ತು ಕೊರೊನದ ಕಾಲದಲ್ಲಿ ಪತ್ರಕರ್ತರ ಸ್ಥಿತಿ ಶೋಚನೀಯವಾಗಿದೆ. ಎಷ್ಟೋ ಮಂದಿ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಬಹಳಷ್ಟು ಮಂದಿ ಅರ್ಧ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲ ಪತ್ರಕರ್ತರು ಸಂಬಳ ಕೊಡದಿದ್ದರೂ ಅಡ್ಡಿಯಿಲ್ಲ ಕೆಲಸ ತೆಗೆಯಬೇಡಿ ಎಂದು ಕೇಳಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ -19 ಉದ್ಯಮವನ್ನು ನೆಲ ಕಚ್ಚುವಂತೆ ಮಾಡಿದೆ. ಸಿಎಂ ಬಿ.ಎಸ್.ಯಡಿಯೂರಪ್ಪನವರ ಸಹಕಾರದಿಂದ ಕೋವಿಡ್‍ನಿಂದ ಪ್ರಾಣ ಕಳೆದುಕೊಂಡ ಸುಮಾರು 31 ಪತ್ರಕರ್ತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ನೆರವು ನೀಡಿದ್ದಾರೆ. ಅಲ್ಲದೇ ಆಯುಷ್ಮಾನ್ ಭಾರತ್ ಯೋಜನೆಗೆ ಪತ್ರಕರ್ತರನ್ನು ಸೇರಿಸಿದ್ದಾರೆ.ಈ ಎಲ್ಲಾ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವೃತ್ತಿ ಬಾಂಧವರ ಸಮಸ್ಯೆಗಳಿಗೆ ಸ್ಪಂದಿಸಿದೆ ಎಂದು ಹೇಳಿದರು.

ಪ್ರೆಸ್‍ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಸ್ವಾಗತಿಸಿದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಕಾಚಿನಕಟ್ಟೆ ವಂದಿಸಿದರು. ದೀಪಕ್ ಸಾಗರ್ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಪತ್ರಕರ್ತರು ಭಾಗವಹಿಸಿದ್ದರು.

Ad Widget

Related posts

ಬಾ.ಮ ಶ್ರೀಕಂಠ ರಿಗೆ ಬಿಜೆಪಿಯಿಂದ ಅಭಿನಂದನೆ

Malenadu Mirror Desk

ಜನಸಾಮಾನ್ಯರಿಗೆ ನಿವೇಶನಗಳನ್ನು ನೀಡಲು ಲೇಔಟ್ ಸಿದ್ದಪಡಿಸಲು ಸಚಿವ ಬೈರತಿ ಸುರೇಶ್ ಸೂಚನೆ

Malenadu Mirror Desk

ಶ್ರೀಕಾಂತ್‌ಗೆ ಜನ್ಮದಿನ ಸಂಭ್ರಮ, ಆಟೋ ಕಾಂಪ್ಲೆಕ್ಸ್‌ನಲ್ಲಿ ಅಭಿಮಾನಿಗಳಿಂದ ಸನ್ಮಾನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.