ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕುಟುಂಬ ವಿಷ ಕುಡಿಯಲು ಮುಂದಾದ ಘಟನೆ ಶಿವಮೊಗ್ಗ ತಾಲೂಕು ಅಗಸವಳ್ಳಿಯಲ್ಲಿ ಮಂಗಳವಾರ ವರದಿಯಾಗಿದೆ.
ಅಗಸವಳ್ಳಿ ಗ್ರಾಮ ಪಂಚಾಯಿತಿಯ ಅಗಸವಳ್ಳಿ ಗ್ರಾಮದಲ್ಲಿ ಈರೇಗೌಡ ಎನ್ನುವವರು ಅಲ್ಲಿನ ಶ್ರೀಮಠದ ಕೆರೆ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಆಕ್ರಮಿಸಿಕೊಂಡಿರುವ ಜಾಗದಲ್ಲಿ ಮನೆ ನಿರ್ಮಿಸುತ್ತಿದ್ದಾರೆ.
ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಶಿವಮೊಗ್ಗ ಎಸಿ ಪ್ರಕಾಶ್ ಹಾಗೂ ತಹಶೀಲ್ದಾರ್ ನಾಗರಾಜ್ ಅಧಿಕಾರಿಗಳೊಂದಿಗೆ ಪೊಲಿಸ್ ರಕ್ಷಣೆಯಲ್ಲಿ ಕೆರೆ ಒತ್ತುವರಿ ತೆರವಿಗೆ ಸ್ಥಳಕ್ಕೆ ಹೋಗಿದ್ದರು. ಈ ಸಂದರ್ಭ ಈರೇಗೌಡರ ಕುಟುಂಬ ಸದಸ್ಯರು ವಿಷಕುಡಿಯುವುದಾಗಿ ಕೀಟನಾಶಕ ಕೈಗೆತ್ತಿಕೊಂಡಿತು. ತಕ್ಷಣ ಎಚ್ಚೆತ್ತ ಕಂದಾಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ವಿಷ ಕಸಿದೆಸೆದು ಈರೇಗೌಡ ಕುಟುಂಬಕ್ಕೆ ತಿಳಿ ಹೇಳಿದರು.
ಅಗಸವಳ್ಳಿಯ ಸರ್ವೇ ನಂಬರ್ 66ರಲ್ಲಿ 27 ಗುಂಟೆ ಕೆರೆ ಜಾಗ ಒತ್ತುವರಿ ಮಾಡಿರುವ ಈರೇಗೌಡ ಕುಟುಂಬ ಯಾವುದೇ ಪರವಾನಗಿ ಹಾಗೂ ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ ಮನೆ ನಿರ್ಮಾಣಕ್ಕೆ ಮುಂದಾಗಿತ್ತು. ಸ್ಥಳದಲ್ಲಿ ಈಗಾಗಲೇ ಮನೆನಿರ್ಮಾಣವನ್ನು ಆರಂಭಿಸಿದೆ. ಒತ್ತುವರಿ ತೆರವಿನ ವೇಳೆ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ನಿರ್ಮಾಣ ಹಂತದ ಮನೆ ತೆರವಿಗೆ ಐದು ದಿನ ಕಾಲಾವಕಾಶ ನೀಡಿ ಅಧಿಕಾರಿಗಳು ವಾಪಸ್ಸಾದರು.