ಮಲೆನಾಡಿನ ಕರೂರು, ತುಮರಿ, ಬ್ಯಾಕೋಡು ಮುಂತಾದ ಹೋಬಳಿಯ ನೋ ನೆಟ್‍ವರ್ಕ್,ನೋ ವೋಟಿಂಗ್ ಅಭಿಯಾನಕ್ಕೆ ಮಾಜಿ ಶಾಸಕ,ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಬೆಂಬಲ ಸೂಚಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನೆಟ್ ವರ್ಕ್ ಸರಿ ಇಲ್ಲದಿರುವುದನ್ನು ವಿರೋಧಿಸಿ ಕೆಲವು ಸ್ಥಳೀಯ ಸಂಘಟನೆಗಳು ನೋ ನೆಟ್‍ವರ್ಕ್,ನೋ ವೋಟಿಂಗ್ ಅಭಿಯಾನ ಹಮ್ಮಿಕೊಂಡಿದ್ದು, ಹೊಸ ಸಂಚಲನ ಸೃಷ್ಟಿಸಿದೆ. ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಡಿಜಿಟಲ್ ಯುಗದಲ್ಲಿ ನೆಟ್‍ವರ್ಕ್ ಸೌಲಭ್ಯ ಕಲ್ಪಿಸದೇ ಇರುವುದು ಬಹುದೊಡ್ಡ ದುರಂತವಾಗಿದೆ. 4 ದೂರ ಸಂಪರ್ಕ ಕಂಪನಿಗಳಿದ್ದರೂ ಕೂಡ ನೆಟ್ ವರ್ಕ್ ಸಿಗುತ್ತಿಲ್ಲ. ಇಂದಿನ ಡಿಜಿಟಲ್ ಯುಗದಲ್ಲೂ ಕೂಡ ಸರ್ಕಾರ ನೆಟ್ ವರ್ಕ್ ನೀಡಲು ಆಗುತ್ತಿಲ್ಲ ಎಂದರೆ ನಾಚಿಕೆಯಾಗಬೇಕು. ಬಹಳ ಅಭಿವೃದ್ಧಿ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಹಾಗೂ ಸಂಸದ ಬಿ.ವೈ. ರಾಘವೇಂದ್ರ ನೆಟ್ ವರ್ಕ್ ಸೌಲಭ್ಯ ಕಲ್ಪಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಜೋಗ ಐಬಿ ಖಾಸಗಿಯವರಿಗೆ ಹುನ್ನಾರ:
ಜೋಗದ ಹಳೆ ಪ್ರವಾಸಿ ಕೇಂದ್ರವನ್ನು ಒಡೆದು ಹಾಕಿ ಅದನ್ನು ತ್ರಿ ಸ್ಟಾರ್ ಹೋಟೆಲ್ ಮಾಡಿ ಖಾಸಗಿಯವರಿಗೆ ಕೊಡುವ ಹುನ್ನಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೈಹಾಕಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಜೋಗ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು 165 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಹಳೆ ಪ್ರವಾಸಿ ಮಂದಿರವನ್ನು, ಅದರ ಮೂಲ ಸ್ವರೂಪವನ್ನು ಬದಲಾಯಿಸಬಾರದು. ಬೇಕಾದರೆ ಹೊಸದಾಗಿ ಕಟ್ಟಡ ನಿರ್ಮಿಸಲಿ ಎಂದು ಹೇಳಿದರು.
ಬಿಎಸ್‍ವೈ ಸಿಎಂ ಆಗಿ ಮುಂದುವರೆಯಲಿ
ಯಡಿಯೂರಪ್ಪನವರೇ ಸಿಎಂ ಆಗಿ ಇರಬೇಕು ಎಂದಿರುವ ಬೇಳೂರು, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಯಡಿಯೂರಪ್ಪ ಇದ್ದರೆ ಶಿವಮೊಗ್ಗ ಜಿಲ್ಲೆಗೆ ಹೆಚ್ಚು ಅನುಕೂಲ. ಜಿಲ್ಲೆ ಹೆಚ್ಚು ಅಭಿವೃದ್ಧಿಯಾಗುತ್ತೇ. ಜೊತೆಗೆ ನೆಟ್ವರ್ಕ್ ಸಮಸ್ಯೆ ಅದ್ರೂ ಬಗೆಹರಿಸುತ್ತಿದ್ದರೇನೋ. ಯಡಿಯೂರಪ್ಪ ಇರಬೇಕು ಎಂಬುದು ನನ್ನ ಅಪೇಕ್ಷೇ. ಇಳಿಸಬೇಕು ಅನ್ನೋರೂ ಬಿಜೆಪಿಯಲ್ಲಿದ್ದಾರೆ. ಅದು ಅವರ ಪಕ್ಷದ ವಿಚಾರ. ಯಾರಾದರೂ ಸಿಎಂ ಆಗಲಿ. ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹುಲ್ತಿಕೊಪ್ಪ ಶ್ರೀಧರ್, ಜಿ.ಡಿ. ಮಂಜುನಾಥ್, ರಾಜಶೇಖರ್ ಇದ್ದರು.