ಶರಾವತಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡಿದ್ದು, ಶನಿವಾರ ಬೆಳಗ್ಗೆ ಹೊತ್ತಿಗೆ 1802.60 ಅಡಿಗೆ ತಲುಪಿದೆ. ಒಂದು ಲಕ್ಷ ಕ್ಯೂಸೆಕ್‍ಗೂ ಅಧಿಕ ಒಳಹರಿವಿದೆ.
ಹೊಸನಗರ ತಾಲೂಕಿನಲ್ಲಿ ಮಳೆಪ್ರಮಾಣ ಶುಕ್ರವಾರಕ್ಕೆ ಹೋಲಿಸಿಕೊಂಡರೆ ಕೊಂಚ ಇಳಿಯಾಗಿದೆ. ತುಂಗಾ ಮತ್ತು ಭದ್ರಾ ನದಿ ಜಲಾನಯನ ಪ್ರದೇಶದಗಳಲ್ಲಿಯೂ ಮಳೆ ಕೊಂಚ ತಗ್ಗಿದೆ. ಭದ್ರಾ ನದಿಗೆ ಶನಿವಾರ ಬೆಳಗ್ಗೆ ಹೊತ್ತಿಗೆ 175 ಅಡಿ ನೀರು ಬಂದಿದೆ. 50195 ಕ್ಯೂಸೆಕ್ ಒಳಹರಿವಿದ್ದು, ಸಂಜೆ ವೇಳೆಗೆ ಡ್ಯಾಮಿನ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ತುಂಗಾ ನಂದಿ ಇನ್ನೂ ತನ್ನ ಗಾಂಭೀರ್ಯ ಕಾಪಾಡಿಕೊಂಡಿದ್ದು, 78832 ಕ್ಯೂಸೆಕ್ ಒಳಹರಿವಿದೆ. ಕಳೆದ ರಾತ್ರಿ ಶಿವಮೊಗ್ಗ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಸಂತ್ರಸ್ತ ಜನರು ರಾತ್ರಿಯಿಡೀ ನಿದ್ರೆ ಬಿಟ್ಟು ಕುಂತಿದ್ದ ಸ್ಥಿತಿ ನಿರ್ಮಾಣವಾಗಿತ್ತು. ನಗರದ ಕುಂಬಾರಗುಂಡಿ, ಶಾಂತಮ್ಮ ಲೇಔಟ್‍ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದ ಕಾರಣ ಮಹನಗರಪಾಲಿಕೆಯಿಂದ ಸುರಕ್ಷಿತ ಸ್ಥಳಗಳಲ್ಲಿ ಬದಲಿ ವ್ಯವಸ್ಥೆ ಮಾಢಲಾಗಿತ್ತು.
ಜಿಲ್ಲೆಯಾದ್ಯಂತ ಶುಕ್ರವಾರ ತಡರಾತ್ರಿ ಮಳೆ ಕೊಂಚ ತಗ್ಗಿದಂತೆ ಕಂಡಿದ್ದು, ಶನಿವಾರ ಬೆಳಗ್ಗೆ ಸೂರ್ಯನ ಕಿರಣಗಳನ್ನು ನೋಡುವಂತಾಗಿದೆ. ಪುಷ್ಯ ಮಳೆಯ ಅಬ್ಬರ ಇಲ್ಲಿಗೇ ತಗ್ಗಿದರೆ ಜಿಲ್ಲೆಯಲ್ಲಿ ಪ್ರವಾಹ ಭೀತಿ ದೂರವಾದಂತಾಗುತ್ತದೆ. ಆದರೆ ಕಳೆದ ಎರಡು ದಿನಗಳಲ್ಲಿ ಮಲೆನಾಡಿನ ಅನೇಕ ಗ್ರಾಮಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಶರಾವತಿ ಕಣಿವೆಯಲ್ಲಿ ಮಳೆ ಕಾರಣದಿಂದ ಜೋಗ ಜಲಪಾತಕ್ಕೆ ವಾರಾಂತ್ಯವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಧಾವಿಸುತ್ತಿದ್ದಾರೆ.