ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮುಖ್ಯಮಂತ್ರಿಯಾಗಲಿದ್ದಾರೆಯೇ? ಹೀಗೊಂದು ಸುದ್ದಿ ಅವರ ಅಭಿಮಾನಗಳಲ್ಲಿ ಹರಿದಾಡುತ್ತಿದೆ. ಅದಕ್ಕೆ ಕಾರಣವೂ ಉಂಟು. ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೊಡುತ್ತಿದ್ದಂತೆ ಮುಂದಿನ ಸಿಎಂ ಯಾರು ಎಂಬ ಚರ್ಚೆ ಆರಂಭವಾಗಿದೆ. ಈ ನಡುವೆ ಈಶ್ವರಪ್ಪ ಅವರು ಖ್ಯಾತ ಅವಧೂತರಾದ ಕೊಪ್ಪ ತಾಲೂಕು ಗೌರಿಗದ್ದೆಯ ವಿನಯ್‌ಗುರೂಜಿ ಅವರನ್ನು ಭೇಟಿ ಮಾಡಿದ್ದಾರೆ. ಅವಧೂತರು ನೀವು ಮುಖ್ಯಮಂತ್ರಿಯಾಗುತ್ತೀರಿ ಎಂಬ ಆಶೀರ್ವಾದ ಗುರೂಜಿ ಕಡೆಯಿಂದ ಸಿಕ್ಕಿದೆ ಎನ್ನಲಾಗಿದೆ.
ಈಶ್ವರಪ್ಪ ಅವರು ಬೆಂಗಳೂರಿನಲ್ಲಿ ಗುರೂಜಿ ಅವರ ಆಶ್ರಮಕ್ಕೆ ಪುತ್ರ ಕಾಂತೇಶ್ ಹಾಗೂ ಕೆಲ ಆಪ್ತರೊಡಗೂಡಿ ಅವಧೂತರನ್ನು ಭೇಟಿ ಮಾಡಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರದ ಸ್ಥಾನ ಈಶ್ವರಪ್ಪರಿಗಿದೆ. ಅವರೊಂದಿಗೇ ಹೆಗಲು ಕೊಟ್ಟು ಪಕ್ಷ ಸಂಘಟಿಸಿದ ಈಶ್ವರಪ್ಪರೂ ೭೦ ವಯೋಮಾನದಲ್ಲಿದ್ದಾರೆ. ಬಿಜೆಪಿ ಸರಕಾರದ ಈಗಿರುವ ಅವಧಿಯಲ್ಲಿ ತಮ್ಮ ಕೋಟಾ ಪೂರೈಸಿಕೊಳ್ಳುವ ಬಯಕೆ ಈಶ್ವರಪ್ಪರಿಗೂ ಇದೆ.
ಪರಿವಾರದ ಬೆಂಬಲ:
ಬಿಜೆಪಿಯಲ್ಲಿ ಈಶ್ವರಪ್ಪ ಪ್ರಭಾವಿ ನಾಯಕರಾಗಿ ಬೆಳೆದಿರುವುದು ಅವರಿಗಿರುವ ಸಂಘನಿಷ್ಠೆಯಿಂದ ಎಂಬುದರಲ್ಲಿ ಎರಡು ಮಾತಿಲ್ಲ. ಯಡಿಯೂರಪ್ಪ ವಿರೊಧಿಗಳು ಬಿಎಸ್‌ವೈ ವೇಗಕ್ಕೆ ಠಕ್ಕರ್ ಕೊಡಲು ಸಾಕಷ್ಟು ಬಾರಿ ಈಶ್ವರಪ್ಪರನ್ನು ಬಳಸಿಕೊಂಡಿದ್ದರು. ರಾಜ್ಯದ ಪ್ರಭಾವಿ ಕುರುಬ ಸಮುದಾಯ ಪ್ರತಿನಿಧಿಸುವ ಈಶ್ವರಪ್ಪರನ್ನು ಮುಖ್ಯಮಂತ್ರಿ ಮಾಡಿದರೆ ಆ ಸಮುದಾಯವನ್ನು ಬಿಜೆಪಿಯತ್ತ ಸೆಳೆಯುವ ದೂರದೃಷ್ಟಿಯಿದ್ದರೆ ಬಿಜೆಪಿ ನಾಯಕರು ಈಶ್ವರಪ್ಪರತ್ತ ಒಲವು ತೋರಬಹುದೆನ್ನಲಾಗಿದೆ.
ರಾಷ್ಟ್ರಮಟ್ಟದಲ್ಲಿ ಬಿಜೆಪಿ ಮತ್ತು ಪರಿವಾರದ ಮೇಲೆ ಬಿಗಿ ಹಿಡಿತ ಹೊಂದಿರುವ ಬಿ.ಎಲ್ ಸಂತೋಷ್‌ಜಿ ಅವರ ಅನುಯಾಯಿಯಾಗಿರುವ ಈಶ್ವರಪ್ಪರಿಗೆ ಈಗ ವಿನಯ್ ಗುರೂಜಿಯವರೂ ಉನ್ನತ ಹುದ್ದೆಯ ಅವಕಾಶವಿದೆ ಎಂದು ಹೇಳಿರುವುದು ಅವರಲ್ಲಿ ಆಸೆ ಚಿಗುರುವಂತೆ ಮಾಡಿದೆ.
ಕಾಕತಾಳೀಯ ಎಂಬಂತೆ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್, ಸಿದ್ಧಾರ್ಥ ಕುಟುಂಬ, ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಪ್ರಮುಖ ರಾಜಕೀಯ ನಾಯಕರ ರಾಜಕೀಯ ಭವಿಷ್ಯ ಕುರಿತು ವಿನಯ್ ಗುರೂಜಿ ಹೇಳಿರುವ ಮಾತುಗಳು ನಿಜವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
previous post
next post