ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಶರಾವತಿ ಸಂತ್ರಸ್ತರು ಸಾಗುವಳಿ ಮಾಡಿರುವ ಭೂಮಿಗೆ ಹಕ್ಕು ಪತ್ರ ನೀಡಬೇಕೆಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ರೈತರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಲಿಂಗನಮಕ್ಕಿ ಅಣೆಕಟ್ಟು ನಿರ್ಮಿಸುವಾಗ ಯಾವುದೇ ಪ್ರಮಾಣ ಪತ್ರ ನೀಡದೆ ಜನರನ್ನು ಮಂಗಗಳನ್ನು ಬಿಡುವಂತೆ ತಂದು ಕಾಡಲ್ಲಿ ಬಿಟ್ಟಿದ್ದಾರೆ. ಕುಟುಂಬಗಳು ಬೆಳೆದಂತೆ ಜೀವನೋಪಾಯಕ್ಕೆ ಸಾಗುವಳಿ ಮಾಡಿಕೊಂಡ ಭೂಮಿಯನ್ನು ದಾಖಲೆಯಲ್ಲಿ ಅರಣ್ಯ ಎಂದು ನಮೂದಿಸಿ ಸರಕಾರಗಳು ವಂಚಿಸಿವೆ. ಹಿಂದೆ ಸಾಗುವಳಿ ಚೀಟಿ ಕೊಟ್ಟ ಭೂಮಿಗೆ ಖಾತೆ ಮಾಡಿಸಿಕೊಳ್ಳುವುದು ಅಸಾಧ್ಯವಾಗಿದೆ ಎಂದು ಅವರು ಹೇಳಿದರು.
ಪುರದಾಳು ಗ್ರಾಮದಲ್ಲಿ ಮುಳುಗಡೆ ಸಂತ್ರಸ್ಥ ಎಲ್ಲರಿಗೂ ಅವರಿರುವ ಭೂಮಿಗೆ ಹಕ್ಕು ಪತ್ರ ನೀಡಬೇಕು. ಕೆಲವರು ಪೇಟೆ ಜನಕ್ಕೆ ಮುಳುಗಡೆ ಪ್ರಮಾಣ ಪತ್ರ ತಂದುಕೊಡುವ ಕಾಯಕ ಮಾಡಿಕೊಂಡಿದ್ದಾರೆ. ಈ ಹಣಮಾಡುವ ದಂಧೆ ಮಾಡುವವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಾಗರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಸವರಾಜಪ್ಪ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜು ಹಿಟ್ಟೂರು,ಜಗದೀಶ, ಪ್ರದೀಪ್ ಹೆಬ್ಬೂರು, ಹೆಬ್ಬೂರು ನಾಗರಾಜ್, ವೀರಭದ್ರಪ್ಪ ಮತ್ತಿತರರು ಇದ್ದರು.
ಕೆಲವರು ಪೇಟೆ ಜನಕ್ಕೆ ಮುಳುಗಡೆ ಪ್ರಮಾಣ ಪತ್ರ ತಂದುಕೊಡುವ ಕಾಯಕ ಮಾಡಿಕೊಂಡಿದ್ದಾರೆ. ಈ ಹಣಮಾಡುವ ದಂಧೆ ಮಾಡುವವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು -ಹೆಚ್.ಆರ್.ಬಸವರಾಜಪ್ಪ