ಸಾಗರ ತಾಲ್ಲೂಕು ಇರುವಕ್ಕಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿರುವುದು ಅತ್ಯಂತ ಸಂಭ್ರಮದ ವಿಷಯವಾಗಿದೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮಿಜಿ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದ ಹಿನ್ನಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಬಜಾರ್ ಮುಂಭಾಗದ ಶಿವಪ್ಪನಾಯಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಇರುವಕ್ಕಿಯಲ್ಲಿ ನಿರ್ಮಾಣವಾಗಿರುವ ಕೃಷಿ ಮತ್ತು ತೋಟಗಾರಿಕೆ ವಿವಿಗೆ ಕೆಳದಿ ಶಿವಪ್ಪ ನಾಯಕ ವಿವಿ ಎಂದು ನಾಮಕರಣ ಮಾಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಮುಖ್ಯಮಂತ್ರಿಗಳಿಗೆ ಮತ್ತು ಸಂಸದರಿಗೆ ಮನವಿ ನೀಡಿತ್ತು. ನಮ್ಮ ಮನವಿಯನ್ನು ಪರಿಗಣಿಸಿ ಕೆಳದಿ ಶಿವಪ್ಪನಾಯಕರ ಹೆಸರನ್ನಿಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಪರವಾಗಿ ಅಭಿನಂದನೆಗಳು ಎಂದರು.
ಕೆಳದಿ ಶಿವಪ್ಪನಾಯಕರ ಹೆಸರು ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಅವರ ಆಡಳಿತ ಅತ್ಯಂತ ಉನ್ನತ ಮಟ್ಟದಲ್ಲಿತ್ತು. ರೈತರು ಯಾವ ಬೆಳೆಯನ್ನು ಬೆಳೆಯುತ್ತಾರೆ. ಇಳುವರಿ ಎಷ್ಟು ಎಂಬುದನ್ನು ಗಮನದಲ್ಲಿಟ್ಟುಕೊಂಡು ಶಿಸ್ತು ಹೆಸರಿನ ಕಂದಾಯ ಪದ್ಧತಿ ಜಾರಿಗೆ ತರುವ ಮೂಲಕ ಐತಿಹಾಸಿಕ ಗಮನಸೆಳೆದವರು. ಅವರ ಹೆಸರನ್ನು ಕೃಷಿ ಮತ್ತು ತೋಟಗಾರಿಕೆ ವಿವಿಗೆ ಇಟ್ಟಿರುವುದು ಅತ್ಯಂತ ಸಮರ್ಥವಾಗಿದೆ ಎಂದರು.
ಹಾಗೆಯೇ ವಿಮಾನ ನಿಲ್ದಾಣಕ್ಕೆ ಅಲ್ಲಮಪ್ರಭು, ಕೆಳದಿ ಚೆನ್ನಮ್ಮ ಅಥವಾ ಅಕ್ಕಮಹಾದೇವಿ ಹೆಸರಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಸರ್ಕಾರ ಯಾವ ತೀರ್ಮಾನ ತೆಗೆದುಕೊಂಡರೂ ಸರಿಯೆ. ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಇಟ್ಟರೂ ಕೂಡ ಅದನ್ನೂ ಸ್ವಾಗತಿಸುತ್ತೇವೆ ಎಂದರು.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಬೇಕೆಂಬುದು ಮಠಾಧೀಶರ ಬಯಕೆಯಾಗಿತ್ತು. ನಾವೆಂದು ಲಿಂಗಾಯತರಿಗೆ ಕೊಡಿ ಎಂದು ಕೇಳಿಲ್ಲ ಎಂದರು.
ಇತಿಹಾಸ ತಜ್ಞ ಖಂಡೋಬರಾವ್, ಮಲೆನಾಡಿನ ಇತಿಹಾಸದ ಬಗ್ಗೆ ವಿವರ ನೀಡಿದರು. ಮಲೆನಾಡು ಮತ್ತು ಶಿವಪ್ಪ ನಾಯಕ ಆಡಳಿತದ ಸಂಕ್ಷಿಪ್ತ ಮಾಹಿತಿ ನೀಡಿದರು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ, ಪ್ರಮುಖರಾದ ರುದ್ರಮುನಿ ಸಜ್ಜನ್, ಎಸ್‌ಎಸ್ ಜ್ಯೋತಿ ಪ್ರಕಾಶ್, ಅನಿತಾ ರವಿಶಂಕರ್, ಮಹೇಶ್, ಆನಂದಮೂರ್ತಿ, ಕತ್ತಿಗೆ ಚನ್ನಪ್ಪ ಮೊದಲಾದವರಿದ್ದರು.
ವಿಮಾನ ನಿಲ್ದಾಣಕ್ಕೆ ಅಲ್ಲಮಪ್ರಭು, ಕೆಳದಿ ಚೆನ್ನಮ್ಮ ಅಥವಾ ಅಕ್ಕಮಹಾದೇವಿ ಹೆಸರಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಸರ್ಕಾರ ಯಾವ ತೀರ್ಮಾನ ತೆಗೆದುಕೊಂಡರೂ ಸರಿಯೆ. ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಇಟ್ಟರೂ ಕೂಡ ಅದನ್ನೂ ಸ್ವಾಗತಿಸುತ್ತೇವೆ– —ಶ್ರೀ ಬಸವ ಮರುಳಸಿದ್ಧ ಸ್ವಾಮಿಜಿ