ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುವ ರಾಜ್ಯ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಮಧುಬಂಗಾರಪ್ಪ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಭಾವುಟ ಹಿಡಿಯಲಿದ್ದಾರೆ.
ಕಳೆದ ಒಂದು ವರ್ಷದಿಂದಲೇ ಜೆಡಿಎಸ್ ಸಖ್ಯ ಕಳೆದು ಕೊಂಡಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವುದು ಖಚಿತವಾಗಿತ್ತು. ಶಿ ವಮೊಗ್ಗದಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಕಾಂಗ್ರೆಸ್‌ಗೆ ಅದ್ದೂರಿ ಎಂಟ್ರಿ ಕೊಡುವ ಉದ್ದೇಶ ಮಧು ಅವರಿಗಿತ್ತು. ಈ ಕಾರಣದಿಂದಲೇ ಒಂದು ವರ್ಷದಿಂದ ಕಾಯುತ್ತಿದ್ದರು. ಆದರೆ ಕೊರೊನಾ ೨ನೇ ಅಲೆ ಬಂದಿದ್ದರಿಂದಾಗಿ ಸಾರ್ವಜನಿಕ ಸಮಾರಂಭ ಏರ್ಪಡಿಸಿ ಕಾಂಗ್ರೆಸ್ ನಾಯಕರನ್ನು ಕರೆಸುವ ಯೋಜನೆ ಮುಂದಕ್ಕೆ ಹೋಗಿದೆ. ಕಾಂಗ್ರೆಸ್‌ನಲ್ಲಿರುವ ಬಂಗಾರಪ್ಪ ಅನುಯಾಯಿಗಳು ಕೇಂದ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಮ್ ನಬಿ ಅಜಾದ್ ಸೇರಿದಂತೆ ಅನೇಕ ನಾಯಕರನ್ನು ಕರೆಸುವ ಉದ್ದೇಶ ಮಧುಬಂಗಾರಪ್ಪ ಬಳಗಕಿತ್ತು.
ಡಿಕೆಶಿಒತ್ತಡ:
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಾರಥ್ಯವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಮಾವೇಶ ಮಾಡಲು ಸಮಯವಿದೆ. ಆದರೆ ಶೀಘ್ರದಲ್ಲಿಯೇ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ನಡೆಯುವ ಕಾರಣ ಶಿವಮೊಗ್ಗ ಮತ್ತು ನೆರೆ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸಂಘಟನೆಗೆ ಮಧು ಬಂಗಾರಪ್ಪ ಅವರ ಅವಶ್ಯಕತೆ ಇದೆ. ತಕ್ಷಣ ಪಕ್ಷ ಸೇರಬೇಕೆಂಬ ಸೂಚನೆ ನೀಡಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಮಧು ಬಂಗಾರಪ್ಪ ಶಿವಮೊಗ್ಗ ಸಮಾವೇಶ ಮುಂದೂಡಿ ಹುಬ್ಬಳಿಯಲ್ಲಿಯೇ ಕಾಂಗ್ರೆಸ್ ಸೇರಲು ವೇದಿಕೆ ಸಜ್ಜು ಮಾಡಿಕೊಂಡಿದ್ದಾರೆ
ಹುಬ್ಬಳ್ಳಿಯತ್ತ ಬೆಂಬಲಿಗರು:
ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರ ಅಭಿಮಾನಿಗಳ ದಂಡು ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ಹುಬ್ಬಳ್ಳಿಯತ್ತ ಧಾವಿಸಿದ್ದಾರೆ. ಸೊರಬ, ಸಾಗರ, ಹೊಸನಗರ ಹಾಗೂ ಶಿವಮೊಗ್ಗದಿಂದ ಹಲವು ವಾಹನಗಳಲ್ಲಿ ಬಂಗಾರಪ್ಪ ಅಭಿಮಾನಿಗಳು ಹುಬ್ಬಳ್ಳಿಗೆ ತೆರಳಿದ್ದಾರೆ. ಕಾಂಗ್ರೆಸ್ ಮುಖಂಡರುಗಳು ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಧುಬಂಗಾರಪ್ಪ ಕಾಂಗ್ರೆಸ್ ಸೇರುವುದನ್ನು ಸ್ವಾಗತಿಸಿವೆ.
ಕಾಂಗ್ರೆಸ್ ತಂತ್ರಗಾರಿಕೆ:
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಎಷ್ಟೇ ಪಕ್ಷ ಕಟ್ಟಿದರೂ ಅವರೊಬ್ಬ ಕಾಂಗ್ರೆಸ್ ನೇತಾರರೇ ಆಗಿದ್ದರು. ಅವರು ಕಾಂಗ್ರೆಸ್‌ನಲ್ಲಿ ಇದ್ದಾಗ ಆ ಪಕ್ಷಕ್ಕೆ ಅಧಿಕಾರ ಬಂದಿತ್ತು. ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಬಂಗಾರಪ್ಪ ಗರಡಿಯಲ್ಲಿ ಬೆಳೆದವರಾಗಿದ್ದಾರೆ. ಈಗ ಬಂಗಾರಪ್ಪ ಕುಟುಂಬ ಕಾಂಗ್ರೆಸ್‌ನಿಂದ ದೂರವಿತ್ತು. ಮಧು ಬಂಗಾರಪ್ಪ ಕಾಂಗ್ರೆಸ್‌ಗೆ ಬಂದರೆ ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಮಂಗಳೂರಿನಲ್ಲಿ ಅನುಕೂಲವಾಗುತ್ತದೆ. ಈ ಜಿಲ್ಲೆಗಳಲ್ಲಿ ಈಗಲೂ ಬಂಗಾರಪ್ಪ ಅವರ ಪ್ರಭಾವ ಇದೆ. ಈ ಹೊತ್ತಿನಲ್ಲಿ ಬಂಗಾರಪ್ಪ ಕುಟುಂಬವನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡರೆ ಅನುಕೂಲ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿದೆ.
ಶಿವಮೊಗ್ಗದಲ್ಲೂ ಅನುಕೂಲ:
ಯಡಿಯೂರಪ್ಪ ಪ್ರಭಾವದಿಂದ ಶಿವಮೊಗ್ಗ ಜಿಲ್ಲೆಯ ಈಡಿಗರೂ ಸೇರಿದಂತೆ ಹಿಂದುಳಿದ ವರ್ಗ ಬಿಜೆಪಿ ಬೆಂಬಲಕ್ಕಿದೆ. ಬಂಗಾರಪ್ಪರ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಬಿಜೆಪಿ ಶಾಸಕರು, ಹರತಾಳು ಹಾಲಪ್ಪ ಬಿಜೆಪಿಯಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ. ಈ ಸಮಯದಲ್ಲಿ ಕಾಂಗ್ರೆಸ್‌ಗೆ ಮಧು ಬಂಗರಪ್ಪ ಬರುತ್ತಿರುವುದು ಶಿವಮೊಗ್ಗ ಕಾಂಗ್ರೆಸ್ ಮಟ್ಟಿಗೆ ಉತ್ತಮ ಬೆಳವಣಿಯಾಗಿದೆ. ಕಳೆದ ಮೂರು ಲೋಕಸಭೆ ಚುನಾವಣೆಯಲ್ಲಿ ಬಂಗಾರಪ್ಪ ಕುಟುಂಬದವರು ಸಂಸದ ರಾಘವೇಂದ್ರರ ವಿರುದ್ಧ ಸ್ಪರ್ಧೆ ಮಾಡಿದ್ದರು. ಮಧು ಬಂಗಾರಪ್ಪ ಅವರು ಗಣನೀಯ ಪ್ರಮಾಣದಲ್ಲಿ ಮತ ಪಡೆದು ಬಿಜೆಪಿಗೆ ಸೆಡ್ಡು ಹೊಡೆದಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಿಮ್ಮೆನೆ ರತ್ನಾಕರ್, ಎಚ್.ಎಂ.ಚಂದ್ರಶೇಖರಪ್ಪ, ಆರ್.ಎಂ.ಮಂಜುನಾಥಗೌಡ ಸೇರಿದಂತೆ ಅನೇಕ ಮುಖಂಡರು ಮಧುಬಂಗಾರಪ್ಪ ಅವರು ಕಾಂಗ್ರೆಸ್‌ಗೆ ಸೇರಿದರೆ ಪಕ್ಷಕ್ಕೆ ಬಲ ಬರಲಿದೆ ಎಂದು ಈಗಾಗಲೇ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು