ವಿದ್ಯಾರ್ಥಿ ಮುಖಂಡನಾಗಿದ್ದ ನನ್ನನ್ನು ರಾಜಕೀಯಕ್ಕೆ ಕರೆತಂದು ಶಾಸಕ,ಸಚಿವನಾಗಿ ಮಾಡಿದ್ದ ರಾಜಕೀಯ ಗುರು ಬಂಗಾರಪ್ಪರ ಪುತ್ರ ಮಧು ಬಂಗಾರಪ್ಪ ಅವರನ್ನು ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಪಕ್ಷಕ್ಕೆ ಕರೆತಂದಿರುವುದು ನನ್ನ ಭಾಗ್ಯ ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತು.
ಹುಬ್ಬಳ್ಳಿಯಲ್ಲಿ ನಡೆದ ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಹತ್ತು ವರ್ಷದಿಂದ ಮಧು ಅವರನ್ನು ಪಕ್ಷಕ್ಕೆ ಕರೆತರಬೇಕೆಂಬ ಬಯಕೆ ಇತ್ತು. ಈಗ ಈಡೇರಿದೆ ಮುಂದೆ ಅವರಿಗೆ ಪಕ್ಷದಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಮತ್ತು ಅವರ ಶಕ್ತಿಯನ್ನು ಬಳಸಿಕೊಳ್ಳುತ್ತೇವೆ ಎಂದು ಶಿವಕುಮಾರ್ ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಜಿತ್ ಸಿಂಗ್ ಸುರ್ಜೇವಾಲ ಅವರು ಮಾತನಾಡಿ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ನಾಯಕರಾದ ರಾಹುಲ್ ಗಾಂಧಿ ಅವರು ಮಧು ಅವರನ್ನು ಪ್ರೀತಿಯಿಂದ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಬಂಗಾರಪ್ಪರ ಪ್ರಭಾವ ಮತ್ತು ಮಧು ಅವರ ಸಂಘಟನೆ ಇನ್ನು ಕಾಂಗ್ರೆಸ್‌ಗೆ ಬಲ ತುಂಬಲಿದೆ. ಪಕ್ಷ ಎಲ್ಲ ಸಹಕಾರವನ್ನು ಮಧು ಅವರಿಗೆ ನೀಡಲಿದೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಾಜ್ಯದ ಕೆಲವೇ ಮಾಸ್‌ಲೀಡರ್‌ಗಳಲ್ಲಿ ಬಂಗಾರಪ್ಪ ಅಗ್ರಗಣ್ಯರು. ಅವರು ಬಿಜೆಪಿಗೆ ಹೋಗದೇ ಇದ್ದಿದ್ದರೆ ಆ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಅವರೊಂದಿಗೆ ಹೋದ ಕೆಲವರು ಬಿಜೆಪಿಗೆ ಹೋಗಿದ್ದಾರೆ. ಅವರನ್ನು ಮರಳಿ ಪಕ್ಷಕ್ಕೆ ತರುವ ಹೊಣೆ ಮಧುಗಿದೆ. ರಾಜ್ಯದೆಲ್ಲಡೆ ಪ್ರವಾಸ ಮಾಡಿ ಈ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರಮುಖರಾದ ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ಸಲೀಂ ಆಹಮದ್, ಅಲ್ಲಂ ವೀರಭದ್ರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ರಾಜ್ಯದ ನಾನಾಕಡೆಯಿಂದ ಬಂಗಾರಪ್ಪ ಅಭಿಮಾನಿಗಳು ಹಾಗೂ ಮಧು ಅವರ ಬೆಂಬಲಿಗರು ಕಾರ್ಯಕ್ರಮಕ್ಕೆ ಬಂದಿದ್ದರು.
ಬಹಳ ವರ್ಷಗಳಿಂದ ಒಂದು ಮೀನಿಗೆ ಬಲೆ ಬೀಸಿದ್ದೆ, ತಪ್ಪಿಸಿಕೊಳ್ಳುತ್ತಲೇ ಇತ್ತು. ಆದರೆ ಈಗ ಗಾಳಕ್ಕೆ ಬಿದ್ದಿರುವುದು ಸಂತೋಷ. ಮಧು ಬಂಗಾರಪ್ಪರಿಗೆ ಪಕ್ಷ ಎಲ್ಲ ನೆರವು ನೀಡಲಿದೆ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ