ಮದುವೆಯಾಗಿ ಹದಿನೆಂಟು ವರ್ಷಗಳ ಬಳಿಕ ಆ ದಂಪತಿಗೆ ಮಗಳು ಹುಟ್ಟಿದ್ದಳು. ಕಟ್ಟಿಕೊಂಡಿದ್ದ ಹರಕೆಗೆ ದೇವರು ಫಲ ನೀಡಿದ. ಆದರೆ ಭುಜಮಟ್ಟ ಬೆಳೆದ ಕರುಳ ಕುಡಿಯನ್ನು ವಿಧಿ ಹೀಗೆ ಕಿತ್ತುಕೊಳ್ಳುತ್ತಾನೆ ಎಂದು ಹೆತ್ತವರು ಅಂದುಕೊಂಡಿರಲಿಲ್ಲ.
ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಶುಕ್ರವಾರ ನೇಣಿಗೆ ಕೊರಳೊಡ್ಡಿದ ಸುಚಿತ್ರಾ(17) ಅವರ ಕರುಣಾಜನಕ ಕತೆಯಿದು. ಗ್ರಾಮದ ನಾಗರಾಜ ಮರಡಿ ಎಂಬುವವರ ಪುತ್ರಿಯಾದ ಸುಚಿತ್ರ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಗಾಗ ಕಾಡುತಿದ್ದ ಅನಾರೋಗ್ಯವೇ ಮಗಳ ಆತ್ಮಹತ್ಯೆಗೆ ಕಾರಣ ಎಂದು ಪೋಷಕರು ತಿಳಿಸಿದ್ದಾರೆ. ಮಗಳಿಗೆ ವಿಪರೀತ ಹೊಟ್ಟೆನೋವು ಕಾಡುತಿತ್ತು. ಚಿಕಿತ್ಸೆಯನ್ನೂ ಕೊಡಿಸಿದ್ದೆವು ಎಂದು ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಮನೆಯವರೆಲ್ಲ ಹೊಲದಲ್ಲಿ ಕೃಷಿ ಕೆಲಸಕ್ಕೆ ಹೋದ ಸಂದರ್ಭ ಸುಚಿತ್ರ ಮನೆಯಲ್ಲಿಯೇ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್‍ನೋಟ್ ಇದೆ ಎಂದು ಹೇಳಲಾಗುತ್ತಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೇಡಿ ಪಡೆದ ಮಗಳನ್ನು ಅಕಾಲಿಕವಾಗಿ ಕಳೆದುಕೊಂಡ ಪೋಷಕರ ಅಕ್ರಂದನ ಹೇಳತೀರದಾಗಿದೆ. ಮೊಬೈಲ್ ಯುಗದ ಧಾವಂತದಲ್ಲಿರುವ ಇಂದಿನ ಮಕ್ಕಳಿಗೆ ಜೀವನದ ಬಗ್ಗೆ ಆತ್ಮಸ್ಥೈರ್ಯ ತುಂಬುವ ಅಗತ್ಯವಿದೆ.