Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಸಂಘರ್ಷವಿಲ್ಲದೆ ಈಡಿಗ ಸಮಾಜ ಸಂಘಟನೆ: ವಿಖ್ಯಾತಾನಂದ ಸ್ವಾಮೀಜಿ ಈಡಿಗ ಸಮುದಾಯದ ಸಮಾಲೋಚನ ಸಭೆಯಲ್ಲಿ ಹೇಳಿಕೆ.

ನಾರಾಯಣ ಗುರುಗಳ ಆದರ್ಶಗಳ ಅಡಿಪಾಯದ ಮೇಲೆ ಯಾವುದೇ ಸಂಘರ್ಷವಿಲ್ಲದೆ ರಾಜ್ಯದಲ್ಲಿ ಈಡಿಗ ಸಮುದಾಯವನ್ನು ಸಂಘಟಿಸುವ ಸಂಕಲ್ಪ ಮಾಡಿದ್ದೇವೆ ಎಂದು ರಾಮನಗರ ಸೋಲೂರು ಈಡಿಗ ಮಹಾಸಂಸ್ಥಾನದ ನಿಯೋಜಿತ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ಈಡಿಗ ಭವನದಲ್ಲಿ ನಡೆದ ಈಡಿಗ ಬಂಧುಗಳ ಸಮಾಲೋಚನ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಸಮಾಜದೊಳಗಿನ ಸಂಕುಚಿತ ಮನೋಭಾವ ಹಾಗೂ ದೂರದರ್ಶಿತ್ವದ ಕೊರತೆಯಿಂದ ಸಮಾಜದ 26 ಪಂಗಡಗಳು ಚದುರಿಹೋಗಿವೆ. ಈ ಎಲ್ಲರನ್ನು ಒಂದುಗೂಡಿಸುವ ಸವಾಲು ಶ್ರೀಮಠದ ಮುಂದಿದೆ ಎಂದು ಹೇಳಿದರು.
ಈಡಿಗ ಮಹಾ ಸಂಸ್ಥಾನವು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವ ಉದ್ದೇಶದಿಂದ ಸಮುದಾಯದ ಮಾಹಿತಿ ಒಳಗೊಂಡ ಒಂದು ಸಾಫ್ಟ್‍ವೇರ್ ಸಿದ್ದವಾಗಿದೆ. ವಿದ್ಯೆ, ಸೂರು, ಆರೋಗ್ಯ ಹಾಗೂ ಉದ್ಯೋಗವನ್ನೇ ಆದ್ಯತೆಯಾಗಿಟ್ಟುಕೊಂಡು ಸಮುದಾಯದ ಮುಂದೆ ಮಠ ಹೋಗಲಿದೆ ಎಂದು ವಿಖ್ಯಾತನಂದ ಶ್ರೀಗಳು ಹೇಳಿದರು.
ಸಿಗಂದೂರು ದೇಗುಲಕ್ಕೂ ಪರಿಹಾರ
ಸಿಗಂದೂರು ದೇವಾಲಯವನ್ನು ಯಾವುದೇ ಕಾರಣಕ್ಕೂ ಸರಕಾರ ಮುಜರಾಯಿ ಇಲಾಖೆಗೆ ಸೇರಿಸಲು ಬಿಡುವುದಿಲ್ಲ.ಇದಕ್ಕೂ ಒಂದು ಪರಿಹಾರ ಸೂತ್ರವನ್ನು ಕಂಡುಕೊಳ್ಳಲಾಗುವುದು.ಸಮುದಾಯದ ಧಾರ್ಮಿಕ ಕೇಂದ್ರದ ಬಗ್ಗೆ ಈಡಿಗ ಸಮುದಾಯಕ್ಕಿರುವ ನಂಬಿಕೆಗೆ ಸರಕಾರ ಗೌರವ ಕೊಡಬೇಕಾಗುತ್ತದೆ ಎಂದು ವಿಖ್ಯಾತಾನಾಂದ ಸ್ವಾಮೀಜ ಹೇಳಿದರು

ಸಿಗಂದೂರು ದೇಗುಲ ಸಮಾಜದ ಆಸ್ತಿ

ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ.ರಾಮಪ್ಪ ಅವರು ಮಾತನಾಡಿ, ಈಡಿಗ ಸಮುದಾಯಕ್ಕೆ ಗುರುಪೀಠ ಮತ್ತು ಸ್ವಾಮೀಜಿ ಬಂದಿರುವುದು ಉತ್ತಮ ಬೆಳವಣಿಗೆ. ಸಿಗಂದೂರು ದೇಗುಲ ಸಮಾಜದ ಆಸ್ತಿ ಅದನ್ನು ರಕ್ಷಿಸಿ ಪೋಷಿಸುವ ಜವಾಬ್ದಾರಿ ಸಮಾಜಕ್ಕಿದೆ. ದೇಗುಲದಿಂದ ಜಾತ್ಯಾತೀತವಾಗಿ ಸಮಾಜಮುಖಿ ಕೆಲಸ ಮಾಡಲಾಗಿದೆ. ಈ ಕ್ಷೇತ್ರ ನಮ್ಮ ಬಳಿ ಇದ್ದರೆ ಸಮಾಜಸೇವೆಗೆ ಶಕ್ತಿಬರುತ್ತದೆ. ಶಕ್ತಿವಂತೆ ದೇವತೆಯ ವಿಚಾರದಲ್ಲಿ ಅನ್ಯಾಯದ ಕೆಲಸ ಯಾರೇ ಮಾಡಿದರೂ ತಕ್ಕ ಫಲ ಉಣ್ಣುತ್ತಾರೆ. ಸರಕಾರ ಮುಜರಾಯಿ ಇಲಾಖೆಗೆ ಸೇರಿಸುವ ಪ್ರಕ್ರಿಯೆ ಮಾಡುತ್ತಿದ್ದರೆ ನಮ್ಮದೇ ಸಮುದಾಯದ ಸಚಿವರು ಮತ್ತು ಶಾಸಕರು ಸುಮ್ಮನೆ ಇರುವುದು ದುರಂತವೇ ಸರಿ ಎಂದರು.

ಜಿಲ್ಲಾ ಈಡಿಗ ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಪಕ್ಷ ಯಾವುದೇ ಇರಲಿ ಸಮಾಜದ ದೃಷ್ಟಿಯಿಂದ ಒಂದಾಗಬೇಕು. ಸಮಾಜದ ಗುರುಪೀಠ ಬಲವಾಗಬೇಕು. ಬೇರೆ ಸಮಾಜದವರಿಗೆ 500 ಕೋಟಿ ರೂ. ಹಣ ಕೊಟ್ಟು ನಿಗಮ ಮಾಡುವ ಸರಕಾರ ನಮ್ಮ ಈಡಿಗ ಸಮುದಾಯ ಕಡೆಗಣಿಸುತ್ತಿರುವುದು ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿದೆ. ನಾನು ಯಾವುದೇ ಪಕ್ಷದಲ್ಲಿ ಇರಬಹುದು. ಈಗಿನ ಸರಕಾರ ಮುಂಬರುವ ಸಂಪುಟದಲ್ಲಿ ಸಮಾಜದ ಶಾಸಕರನ್ನು ಸೇರಿಸಿಕೊಳ್ಳಬೇಕು ಎಂದು ಬೇಳೂರು ಆಗ್ರಹಿಸಿದರು.

ಗಟ್ಟಿತನ ಬರಲು ಒಗ್ಗಟ್ಟು ಮುಖ್ಯ
ರಾಜ್ಯ ಈಡಿಗ ಸಂಘದ ಅಧ್ಯಕ್ಷ ಡಾ. ತಿಮ್ಮೇಗೌಡ ಮಾತನಾಡಿ, ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿ ಹಿಂದೆ ರಾಜ್ಯದ 55 ಲಕ್ಷ ಈಡಿಗರಿದ್ದೇವೆ. ಸರಕಾರ ಈ ವಿಚಾರದಲ್ಲಿ ಅನ್ಯಾಯ ಮಾಡಿದರೆ ಬೀದಿಗಿಳಿಯುತ್ತೇವೆ. ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದ ಸರಕಾರಗಳು ನಮ್ಮನ್ನು ಕಡೆಗಣಿಸುತ್ತಿವೆ. ಬಂಗಾರಪ್ಪ ಇದ್ದ ಅವಧಿಯಲ್ಲಿ ನಮ್ಮನ್ನು ಯಾರೂ ಮುಟ್ಟುತ್ತಿರಲಿಲ್ಲ. ಅಂತಹ ಗಟ್ಟಿತನ ಬರಲು ಒಗ್ಗಟ್ಟು ಮುಖ್ಯ ಎಂದರು.

ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮಾಜಿ ಸದಸ್ಯ ಬಂಡಿ ರಾಮಚಂದ್ರ ಮಾತನಾಡಿ, ಯಾವ ಧಾರ್ಮಿಕ ಕ್ಷೇತ್ರಕ್ಕೂ ಇಲ್ಲದ ಕಾನೂನನ್ನು ಸಿಗಂದೂರಿಗೆ ತಂದರೆ ಸಮುದಾಯ ದೊಡ್ಡ ಹೋರಾಟ ಮಾಡಲಿದೆ ಎಂದರು.
ರಾಜ್ಯಬಿಲ್ಲವರ ಸಂಘದ ಅಧ್ಯಕ್ಷ ವೇದಕುಮಾರ್ ಮಾತನಾಡಿ, ಪಕ್ಷ ಯಾವುದೇ ಇರಲಿ ನಮ್ಮವರನ್ನು ಗೆಲ್ಲಿಸಿ ಸಮುದಾಯ ಸಂಘಟನೆ ಮಾಡೋಣ. ನಮ್ಮಲ್ಲಿನ ಉಪಪಂಗಡಗಳ ಒಳಗಿನ ಬೇಧಭಾವ ಬಿಡೋಣ ಎಂದು ಹೇಳಿದರು. ಈಡಿಗ ಸಂಘದ ಯುವ ಘಟಕದ ದುಷ್ಯಂತ, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಭುಜಂಗಯ್ಯ, ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೆಯ, ಡಾ.ರಾಜನಂದಿನಿ ಕಾಗೋಡು, ಸುರೇಶ್ ಬಾಳೇಗುಂಡಿ, ಪರಶುರಾಮಪ್ಪ, ಅಜ್ಜಪ್ಪ, ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ಪ್ರವೀಣ ಹಿರೇಇಡಗೋಡು, ನಾಗರಾಜ್ ಕೈಸೋಡಿ, ಕಲ್ಲಪ್ಪ ಮತ್ತಿತರರಿದ್ದರು.
ಜಿಲ್ಲಾ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್‍ಹುಲ್ತಿಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಸಿ.ರಾಮಚಂದ್ರ ಸ್ವಾಗತಿಸಿದರು. ತೇಕಲೆ ರಾಜಪ್ಪ ನಿರೀಪಿಸಿದರು. ಕುಮಾರಿ ಚಂದನಾ ಎಚ್.ಆರ್. ಪ್ರಾರ್ಥಿಸಿದರು.

ಪಾದಪೂಜೆ ಮಾಡಿಸಿಕೊಳ್ಳುವುದಿಲ್ಲ, ಹಲಗೆ ಮೇಲೆ ಮಲಗುವೆ. ಯಾವ ಕಿರೀಟ ತೊಡದೆ ಸಾಮಾನ್ಯ ವ್ಯಕ್ತಿಯಂತೆ ಸಮಾಜದ ಸೇವೆ ಮಾಡುವೆ.

ವಿಖ್ಯಾತಾನಾಂದ ಸ್ವಾಮೀಜ


ಸಿಗಂದೂರು ಚೌಡಮ್ಮ ದೇವಿ ದೇವಸ್ಥಾನಕ್ಕೆ ಕೈಹಾಕಿದ ಒಂದು ವಿಕೆಟ್ ಹೋಗಿದೆ. ಇನ್ನೂ ಮೂರು ವಿಕೆಟ್ ಇದ್ದು, ಅವುಗಳು ಸಧ್ಯ ಹೋಗಲಿವೆ
ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ

Ad Widget

Related posts

ನಕಲಿ ಗೊಬ್ಬರ ಮಾರಾಟದ ವಿರುದ್ಧ ಕ್ರಮ : ಬಿ. ಸಿ ಪಾಟೀಲ್

Malenadu Mirror Desk

ಯುವಜನರು ಪುಸ್ತಕ ಓದಿನಿಂದ ವಿಮುಖರಾಗುತ್ತಿರುವುದು ವಿಷಾದನೀಯ ; ಜಿಲ್ಲಾಧಿಕಾರಿ

Malenadu Mirror Desk

ಪ್ರಿಯದರ್ಶಿನಿ ಆಂಗ್ಲ ಶಾಲೆ ಅದ್ವಿತೀಯ ಸಾಧನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.