Malenadu Mitra
ರಾಜ್ಯ ಶಿವಮೊಗ್ಗ

ಪ್ರಮುಖ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ

ವಿಮಾನ ನಿಲ್ದಾಣ ಕಾಮಗಾರಿ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಪ್ರಮುಖ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

ವಿಮಾನ ನಿಲ್ದಾಣದ ಎಟಿಸಿ ಟವರ್ ನೋಂದಣಿ ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಆದಷ್ಟು ಬೇಗನೆ ಮುಗಿಸಬೇಕು. ಬಾಕಿ ಉಳಿದಿರುವ ಕಂಪೌಂಡ್ ಕೆಲಸ ಹಾಗೂ ಕುಡಿಯುವ ನೀರು ಪೂರೈಕೆ ಕಾಮಗಾರಿಗಳನ್ನು ಆದಷ್ಟು ಬೇಗನೆ ಪ್ರಾರಂಭಿಸಬೇಕು ಎಂದರು.

ವಿಮಾನ ನಿಲ್ದಾಣ ಕಾಮಗಾರಿಗೆ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ 38 ಎಕ್ರೆ ಜಮೀನಿನಲ್ಲಿ ವಸತಿಗಾಗಿ ಲೇಔಟ್ ನಿರ್ಮಿಸಿ, ನಿವೇಶನಗಳನ್ನು ಹಂಚಿಕೆ ಮಾಡುವ ಕುರಿತಾದ ಪ್ರಸ್ತಾವನೆಯನ್ನು ಕಂದಾಯ ಇಲಾಖೆ ಹಾಗೂ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಿಗಂದೂರು ಸೇತುವೆ ನಿರ್ಮಾಣ ನಿಗದಿಯಂತೆ ನಡೆಯುತ್ತಿದೆ. ಕಾಮಗಾರಿಗೆ ಸ್ಥಳೀಯವಾಗಿ ಮೈನಿಂಗ್ ಅನುಮತಿ ನೀಡಲಾಗಿದ್ದು, ಅನಿಯಂತ್ರಿತ ಬ್ಲಾಸ್ಟಿಂಗ್ ಕುರಿತು ಸ್ಥಳೀಯರಿಂದ ದೂರುಗಳು ದಾಖಲಾಗಿವೆ. ಈ ಕುರಿತು ಉಪ ವಿಭಾಗಾಧಿಕಾರಿಗಳು ಸ್ಥಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಚಿತ್ರದುರ್ಗ-ಶಿವಮೊಗ್ಗ ಚತುಷ್ಪಥ ರಸ್ತೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ತಕ್ಷಣ ಪ್ರಾರಂಭಿಸಬೇಕು. ವಿವಿಧ ಯೋಜನೆಗಳ ಅನುಷ್ಟಾನಕ್ಕೆ ಪ್ರಗತಿಯಲ್ಲಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಸರ್ಕಾರದ ಹಂತದಲ್ಲಿರುವ ವಿವಿಧ ಯೋಜನೆಗಳ ಪ್ರಸ್ತಾವನೆಗಳಿಗೆ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ನಗರದಲ್ಲಿ ಹೊಸದಾಗಿ ಪೊಲೀಸ್ ಅಧೀಕ್ಷಕರ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಜಮೀನು ಗುರುತಿಸಿ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಟ್ಟಡದ ನಿರ್ಮಾಣಕ್ಕಾಗಿ 13.70 ಕೋಟಿ ರೂ. ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸಲಾಗಿದೆ.

ಇದೇ ರೀತಿ ತೆವರಚಟ್ನಳ್ಳಿ ಗ್ರಾಮದಲ್ಲಿ 9 ಎಕ್ರೆ ಪ್ರದೇಶದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಸೋಮಿನಕೊಪ್ಪದಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಹೆಸರಿನಲ್ಲಿರುವ 20 ಎಕ್ರೆ ಪ್ರದೇಶದಲ್ಲಿ ಖೇಲೋ ಇಂಡಿಯಾ ಯೋಜನೆಯಡಿ ಜಿಲ್ಲಾ ಕ್ರೀಡಾ ಸಂಕೀರ್ಣ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನವುಲೆ ಗ್ರಾಮದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ಕುರಿತು ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಪುನಃ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಉಪ ವಿಭಾಗಾಧಿಕಾರಿ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Ad Widget

Related posts

ನೈಜ ಕತೆಯ ಸಿನಿಮಾಯಶಸ್ವಿಯಾಗುತ್ತದೆ ಸಂವಾದದಲ್ಲಿ ಚಿತ್ರನಟ ದೊಡ್ಡಣ್ಣ ಅಭಿಮತ

Malenadu Mirror Desk

ರಕ್ತದಲ್ಲಿ ಬರೆದುಕೊಡುವೆ, ಬಿಜೆಪಿ ಆಪರೇಷನ್ ಕಮಲ ಯಶ ಕಾಣುವುದಿಲ್ಲ: ಬೇಳೂರು

Malenadu Mirror Desk

ಹಂದಿ ಅಣ್ಣಿ ಕೊಲೆ ಆರೋಪಿಗಳು ಶಿವಮೊಗ್ಗಕ್ಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.