ವಿವಿ ಶೈಕ್ಷಣಿಕ ಪ್ರಗತಿಯ ಚಿಂತನ-ಮಂಥನ ಕಾರ್ಯಕ್ರಮ
ಕುವೆಂಪು ವಿಶ್ವವಿದ್ಯಾಲಯವು ಕೋವಿಡ್-೧೯ ಸಂಕಷ್ಟ ಕಾಲದಲ್ಲಿಯೂ ಯಾವುದೇ ಹಿನ್ನಡೆಯಾಗದಂತೆ ಆನ್‌ಲೈನ್ ತರಗತಿಗಳು, ಉಪನ್ಯಾಸ ಸರಣಿಗಳು ಮತ್ತು ವೆಬಿನಾರ್‌ಗಳನ್ನು ನಡೆಸುವ ಮೂಲಕ ಬೌದ್ಧಿಕ ಬೆಳವಣಿಗೆಗೆ ಒತ್ತು ನೀಡಿದೆ ಎಂದು ವಿವಿಯ ಕುಲಪತಿ ಪ್ರೊ. ಬಿ ಪಿ ವೀರಭದ್ರಪ್ಪ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಜ್ಞಾನಸಹ್ಯಾದ್ರಿ ಆವರಣದ ಬಸವ ಸಭಾ ಭವನದಲ್ಲಿ ಸೋಮವಾರ ನಡೆದ “ವಿವಿ ಶೈಕ್ಷಣಿಕ ಪ್ರಗತಿಯ ಚಿಂತನ-ಮಂಥನ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ಆನ್‌ಲೈನ್ ಫ್ಲಾಟ್‌ಫಾರ್ಮ್ಗಳ ಮೂಲಕ ಕಳೆದ ಒಂದೂವರೆ ವರ್ಷಗಳಿಂದ ಚಲನಶೀಲರನ್ನಾಗಿ ಮುನ್ನಡೆಸಲಾಗಿದೆ. ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗದಂತೆ ಆನ್‌ಲೈನ್ ಮೂಲಕವೇ ಘಟಿಕೋತ್ಸವವನ್ನು ಯಶಸ್ವಿಯಾಗಿ ನಡೆಸಿ ಮೇಲ್ಪಂಕ್ತಿ ನಿರ್ಮಿಸಲಾಯಿತು. ಕೊರೊನಾ ಸಮಸ್ಯೆಯು ಪ್ರಗತಿಗೆ ಅಲ್ಪ ತಡೆಯಾದರೂ ಸಹ ವಿವಿಯು ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಮುಂದಿದೆ ಎಂದರು.
ವಿದೇಶಿ ವಿವಿಗಳೊಂದಿಗೆ ಸಂಶೋಧನಾ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಈ ಮೂಲಕ ಅಧ್ಯಾಪಕರುಗಳಿಗೆ ಸಂಶೋಧನೆಯನ್ನು ತೀವ್ರಗೊಳಿಸಲು ವಾತಾವರಣ ಸೃಷ್ಟಿಸಲಾಗಿದೆ. ವಚನಕಾರ್ತಿ ಅಕ್ಕಮಹಾದೇವಿ, ಅಲ್ಲಮಪ್ರಭು, ಡಾ. ರಾಜ್‌ಕುಮಾರ್ ಸೇರಿದಂತೆ ಹಲವು ಮಹನೀಯರುಗಳ ಅಧ್ಯಯನ ಪೀಠಗಳನ್ನು ಆರಂಭಿಸಿ ಅವರ ಕೊಡುಗೆ, ಚಿಂತನೆಗಳ ಕುರಿತ ಸಂಶೋಧನೆಗಳನ್ನು ಕೈಗೊಳ್ಳಲು ಉತ್ತೇಜಿಸಲಾಗಿದೆ. ದೇಶದ ಪ್ರತಿಷ್ಠಿತ ಡಿ.ಆರ್.ಡಿ.ಓ. ಸಂಸ್ಥೆಯು ಸಂಶೋಧನಾ ಪ್ರಯೋಗಾಲಯವನ್ನು ವಿವಿಯಲ್ಲಿ ಆರಂಭಿಸಲು ಯೋಜಿಸುತ್ತಿದೆ. ದೂರಶಿಕ್ಷಣ ನೀಡುವ ಅವಕಾಶವನ್ನು ನಿಲ್ಲಿಸಿದಾಗ ಯು.ಜಿ.ಸಿ. ಜೊತೆಗೆ ಸಮನ್ವಯ ಸಾಧಿಸಿ ವಿವಿಗೆ ಆನ್‌ಲೈನ್ ಮೂಲಕ ಪದವಿ, ಸ್ನಾತಕೋತ್ತರ ಕೋರ್ಸ್ಗಳನ್ನು ನೀಡುವ ಅರ್ಹತೆ ಮತ್ತು ಅನುಮತಿಯನ್ನು ದೊರಕಿಸಿಕೊಳ್ಳಲಾಗಿದೆ. ಈಗಾಗಲೇ ಪ್ರವೇಶಾತಿ ಕಾರ್ಯವನ್ನು ಆರಂಭಿಸಲಾಗಿದೆ.
ವಿವಿಯ ಸೆಕ್ಯುರಿಟಿ ಗಾರ್ಡ್ಗಳು ಮತ್ತು ಸ್ವಚ್ಚತಾ ಕಾರ್ಮಿಕರಿಗೆ ಉಚಿತವಾಗಿ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ ಹಾಗೂ ಕಳೆದ ಒಂದೂವರೆ ವರ್ಷಗಳಿಂದ ಕೊರೊನಾ ಸಂಕಷ್ಟ ಕಾಲದಲ್ಲಿಯೂ ಯಾವುದೇ ಸಣ್ಣ ತೊಂದರೆಯಾಗದಂತೆ ಪಾಠ-ಪ್ರವಚನ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆನ್‌ಲೈನ್ ಹಾಗೂ ಭೌತಿಕ ಮಾದರಿಗಳಲ್ಲಿ ಮುನ್ನಡೆಸಲಾಗಿದೆ.
ಕುಲಸಚಿವರಾದ ಅನುರಾಧ ಜಿ. ಮಾತನಾಡಿ, ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಸಾಂಸ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಯೋಜನೆಗಳನ್ನು ರೂಪಿಸಲಾಗಿದ್ದು, ಕುಲಪತಿಗಳ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯದ ರ‍್ಯಾಂಕಿಂಗ್ ಉತ್ತಮಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ್, ಪ್ರಾಧ್ಯಾಪಕರುಗಳಾದ ಪ್ರೊ. ಜಯಣ್ಣ, ಪ್ರೊ. ಜಯರಾಮ್ ಭಟ್ ಸೇರಿದಂತೆ ಹಲವರು ವಿವಿ ಬೆಳವಣಿಗೆಯನ್ನು ಮೆಲುಕುಹಾಕಿದರು. ವಿ.ವಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸರ್ಕಾರದ ಮಾರ್ಗಸೂಚಿಯ ಅನ್ವಯ ದೈಹಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.