ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಖೇಲೊ ಇಂಡಿಯಾದ ವಿಶೇಷ ಕ್ರೀಡಾ ತರಬೇತಿ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಕೈ ಬಿಟ್ಟಿದಿಯೆ ? . ಹೌದು ಹೀಗೊಂದು ಅನುಮಾನ ಬರಲು ಕಾರಣವೂ ಉಂಟು. ಸೋಮವಾರ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಖೇಲೋ ಇಂಡಿಯಾ ಪ್ರಾಜೆಕ್ಟ್ ಅನ್ನು ಪಶು ವೈದ್ಯ ಕಾಲೇಜು ಕ್ಯಾಂಪಸ್ ನಲ್ಲಿ ಅನುಷ್ಠಾನಗೊಳಿಸಲು ಪುನರ್ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಈ ಹೇಳಿಕೆಯಿಂದ ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಅಭಿಯಾನಕ್ಕೆ ತಾತ್ಕಾಲಿಕ ಜಯ ಸಿಕ್ಕಂತಾಗಿದೆ. ಸಹ್ಯಾದ್ರಿ ಕ್ಯಾಂಪಸ್ ನಲ್ಲಿನ 18ಎಕರೆ ಜಾಗದಲ್ಲಿ ಕ್ರೀಡಾ ತರಬೇತಿ ಕೇಂದ್ರ ಸ್ಥಾಪಿಸಲು ಜಿಲ್ಲಾಡಳಿತ, ಸೇಲ್ ಹಾಗೂ ಕ್ರೀಡಾ ಪ್ರಾಧಿಕಾರ ಮುಂದಾಗಿದ್ದು, ಈ ಯೋಜನೆ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಅವರು ವಿಶೇಷ ಆಸಕ್ತಿ ವಹಿಸಿದ್ದರಲ್ಲದೆ, ಪ್ರಮುಖ ಯೋಜನೆಯನ್ನು ಮಂಜೂರು ಮಾಡಿಸಿದ್ದರು.
ಸಹ್ಯಾದ್ರಿ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಕ್ಯಾಂಪಸ್ ಉಳಿಸಿ ಪ್ರತಿಭಟನೆ ಮತ್ತು ಅಭಿಯಾನ ನಡೆಸಲಾಗಿತ್ತು. ಕ್ರೀಡಾ ತರಬೇತಿ ಕೇಂದ್ರ ಬೇಕು ಆದರೆ ಸಹ್ಯಾದ್ರಿ ಕ್ಯಾಂಪಸ್ ಕಾಲೇಜಿಗೆ ಉಳಿಯಬೇಕು ಎಂಬುದು ಇವರ ಉದ್ದೇಶವಾಗಿತ್ತು.