ಶಿವಮೊಗ್ಗ ೫: ಸಾಗರ ತಾಲೂಕು ತುಮರಿ ಸಮೀಪದ ಅರಬಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಹರಿದು ಬಿದ್ದ ಕಾರಣ ಒಂದು ಹಸು ಮತ್ತು ಎರಡು ಹೋರಿಗಳು ಸಾವಿಗೀಡಾಗಿವೆ. ಗೋಪಾಲಕೃಷ್ಣ ಹಾಗೂ ಅವರ ಪಕ್ಕದ ಮನೆಗೆ ಸೇರಿದವೆನ್ನಲಾದ ಜಾನುವಾರುಗಳು ಹೋಗುವ ಹಾದಿಯಲ್ಲಿಯೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಎಂದಿನಂತೆ ಕಾಡಿಗೆ ಮೇಯಲು ಹೋಗುವಾಗ ತಂತಿಯ ಮೇಲೆ ಕಾಲಿಟ್ಟಾಗ ವಿದ್ಯುತ್ ಪ್ರವಹಿಸಿದೆ. ಅನತಿ ದೂರದಲ್ಲಿಯೇ ಜಾನುವಾರುಗಳ ಗುಂಪೇ ಇದ್ದು, ಸ್ವಲ್ಪದರಲ್ಲೇ ಮೂಕ ಪ್ರಾಣಿಗಳ ಮಾರಣಹೋಮ ತಪ್ಪಿದಂತಾಗಿದೆ. ವಿಷಯ ಗೊತ್ತಗುತ್ತಿದ್ದಂತೆ ಗ್ರಾಮಸ್ಥರು ಮುತುವರ್ಜಿ ವಹಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಇದೇ ಕಾಲುದಾರಿಯಲ್ಲಿ ಜನರು ದ್ವಿಚಕ್ರ ವಾಹನದಲ್ಲಿ ಸಂಚರಿಸುವುದು ಮಾಮೂಲಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಅವಘಢವಾಗಿಲ್ಲ. ಸ್ಥಳಕ್ಕೆ ಮೆಸ್ಕಾಂ ಹಾಗೂ ಪೊಲೀಸ್ ಸಿಬ್ಬಂದಿ ಬಂದು ಸ್ಥಳ ಮಹಜರು ಮಾಡಿದ್ದಾರೆ. ವಿಪರೀತ ಮಳೆಯ ಕಾರಣ ಕಾಡಿನಲ್ಲಿ ಮರದ ಟೊಂಗೆ ಬಿದ್ದ ಕಾರಣ ವಿದ್ಯುತ್ ತಂತಿ ತುಂಡಾಗಿದೆ.