ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಪ್ರಮಾಣ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರಾಥಮಿಕವಾಗಿ 418 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ ಎಂದು ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅತಿವೃಷ್ಟಿಯಿಂದ ಹಾನಿಗೀಡಾಗಿರುವ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಪ್ರದೇಶಗಳಿಗೆ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಅರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಾನಿಗೀಡಾದ ಕೃಷಿ ಭೂಮಿ, ಮನೆಗಳು, ಪ್ರಾಣ ಹಾನಿ, ಜಾನುವಾರು ಹಾನಿ ಸೇರಿದಂತೆ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಸರಕಾರದ ಮಾರ್ಗಸೂಚಿ ಹೊರತುಪಡಿಸಿ ಹೆಚ್ಚುವರಿ ಪರಿಹಾರ ಒದಗಿಸುವ ಕುರಿತು ಪ್ರಯತ್ನಿಸಲಾಗುವುದು ಎಂದರು.
ಅತಿವೃಷ್ಟಿ ನಷ್ಟ ಪರಿಹಾರ ಸಮೀಕ್ಷೆ ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವರದಿ ಕೈ ಸೇರಿದ ಬಳಿಕ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚುವ ಅರಗ ಜ್ಞಾನೇಂದ್ರ ತಿಳಿಸಿದರು.
ಸಚಿವರು ಗುಡ್ಡ ಕುಸಿತದಿಂದ ಹಾನಿಗೀಡಾದ ಕೂಡಿಗೆ ಮಜಿರೆಯ ಹೆಗ್ಗಾರು ಬೆಟ್ಟ, ಭಾರತಿಪುರ ಬಳಿಯ ಹೆದ್ದಾರಿ ಕುಸಿತ, ಎಡೆಹಳ್ಳಿ ಕೆರೆ ಬಳಿಯ ಗುಡ್ಡ ಕುಸಿತ ಸ್ಥಳ, ಯೋಗಿ ನರಸೀಪುರ ಬಳಿಯ ಹುಲಿಬೆಟ್ಟ ಗುಡ್ಡ ಕುಸಿತ ಹಾಗೂ ಗೇರುವಳ್ಳಿ ಬಳಿ ರಸ್ತೆ ಕುಸಿದ ಸ್ಥಳ ಪರಿಶೀಲನೆ ನಡೆಸಿದರು
ಹಾನಿಯ ವಿವರ:
ಸಣ್ಣ ರೈತರ ಕೃಷಿ ಭೂಮಿ-4609 ಹೆಕ್ಟೇರುಗಳು, ತೋಟಗಾರಿಕೆ ಭೂಮಿ- 1132 ಹೆಕ್ಟೇರ್, ಇತರೆ ರೈತರ ಕೃಷಿ ಭೂಮಿ -240 ಹೆಕ್ಟೇರ್, ಮೃತ ಪಟ್ಟ ಜಾನುವಾರುಗಳು 27, ಸಂಪೂರ್ಣ ಹಾನಿಯಾದ ಮನೆಗಳು (ಕಚ್ಛಾ ಮತ್ತು ಪಕ್ಕಾ ಸೇರಿ) – 126, ಹೆಚ್ಚಿನ ಹಾನಿಯಾಗಿರುವ ಮನೆಗಳು (ಕಚ್ಛಾ ಮತ್ತು ಪಕ್ಕಾ ಸೇರಿ) -478, ಭಾಗಶಃ ಹಾನಿಯಾಗಿರುವ ಮನೆಗಳು (ಕಚ್ಛಾ ಮತ್ತು ಪಕ್ಕಾ ಸೇರಿ) -540, ರಾಜ್ಯ ಹೆದ್ದಾರಿ – 56 ಕಿ.ಮೀ., ಜಿಲ್ಲಾ ಮುಖ್ಯ ರಸ್ತೆ – 138 ಕಿ.ಮೀ., ಗ್ರಾಮೀಣ ರಸ್ತೆ – 1243 ಕಿ.ಮೀ., ನಗರ ರಸ್ತೆಗಳು – 168 ಕಿ.ಮೀ., ಸೇತುವೆಗಳು – 196, ವಿದ್ಯುತ್ ಕಂಬಗಳು -2033, ಅಂಗನವಾಡಿ ಕಟ್ಟಡಗಳು – 309, ಪ್ರಾಥಮಿಕ ಶಾಲೆಗಳು – 1000, ಕೆರೆಗಳು – 326, ಮಾನವ ಹಾನಿ – 4 ಸಂಭವಿಸಿವೆ. 10ಕಾಳಜಿ ಕೇಂದ್ರಗಳಲ್ಲಿ 640 ಜನರಿಗೆ ಆಶ್ರಯ ಒದಗಿಸಲಾಗಿತ್ತು ಎಂದು ಈಶ್ವರಪ್ಪ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕೆಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ, ಎಸ್ಪಿ ಲಕ್ಷ್ಮೀ ಪ್ರಸಾದ್ ಮತ್ತಿತರರು ಉಪಸ್ತಿತರಿದ್ದರು.