ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್ ನಲ್ಲಿ ಖೇಲೋ ಇಂಡಿಯಾ ಯೋಜನೆಯಡಿ ವಿಶೇಷ ಕ್ರೀಡಾ ಸಂಕೀರ್ಣ ಮತ್ತು ಕ್ರೀಡಾ ತರಬೇತಿ ನಿರ್ಮಿಸಲು ಮುಂದಾದ ಸಂಸದ ಬಿ.ವೈ ರಾಘವೇಂದ್ರ ಹಾಗೂ ಕೇಂದ್ರ ಸರ್ಕಾರದ ನಿಲುವನನ್ನು ಖಂಡಿಸಿ ಸಹ್ಯಾದ್ರಿ ಕಾಲೇಜ್ ನಲ್ಲಿ ಕೊರೋನಾ ಭೀತಿಯನ್ನು ಲೆಕ್ಕಿಸದೇ ನೂರಾರು ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಕನ್ನಡಪರ, ದಲಿತಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದರು.
ಈ ಕ್ರೀಡಾ ಸಂಕೀರ್ಣದಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಮೈಸೂರು ಜಯಚಾಮರಾಜೇಂದ್ರ ಒಡೆಯರ್ ಅವರು ಶೈಕ್ಷಣಿಕ ಉದ್ದೇಶಕ್ಕಾಗಿಯೇ ೧೦೦ ಎಕರೆ ಭೂಮಿಯನ್ನು ಬಡ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಮೀಸಲಿಟ್ಟಿದ್ದರು. ಸದ್ಯ ಇಲ್ಲಿ ೬ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳಿಗೆ ವ್ಯಾಸಂಗ ಕೊಠಡಿಗಳು, ಹಾಸ್ಟೆಲ್ ಹಾಗೂ ವಾಚನಾಲಯ, ಲ್ಯಾಬೋರೇಟರಿ ಸೇರಿದಂತೆ ವಿವಿಧ ಶೈಕ್ಷಣಿಕ ಅಭಿವೃದ್ಧಿ ಚಟುವಟಿಕೆಗಳಿಗೆ ಮತ್ತು ಮೂಲಭೂತ ಸೌಲಭ್ಯಗಳಿಗೆ ನಗರದ ಮಧ್ಯದ ಈ ಪ್ರದೇಶ ಅವಶ್ಯಕತೆ ಇದ್ದು, ಈ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಕ್ರೀಡಾ ತರಬೇತಿ ಸಂಕೀರ್ಣ ಮಾಡಲು ೨೫ ಎಕರೆಗೂ ಹೆಚ್ಚಿನ ಭೂಮಿ ಅವಶ್ಯಕತೆ ಇರುವುದರಿಂದ ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ವಿಷಯಗಳ ತರಗತಿ ಕೊಠಡಿಗಳು ಸೇರಿದಂತೆ ಅನೇಕ ಚಟುವಟಿಕೆಗಳಿಗಾಗಿ ಜಾಗದ ಕೊರತೆ ಉಂಟಾಗುತ್ತದೆ ಎಂದರು.
ಭವಿಷ್ಯದ ಹಲವಾರು ಅಭಿವೃದ್ಧಿ ಯೋಜನೆಗಳ ದೃಷ್ಠಿಯಿಂದ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಯಾವುದೇ ಕಾರಣಕ್ಕೂ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಜಿಲ್ಲಾಡಳಿತ ಮತ್ತು ಕುವೆಂಪು ವಿಶ್ವವಿದ್ಯಾಲಯ ಈ ಯೋಜನೆಯನ್ನು ತಿರಸ್ಕರಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ, ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್ ನಲ್ಲಿ ಬೇಡ. ಆಯನೂರು ಕಾಲೇಜ್ ಬಳಿ ೫೦ ಎಕರೆ ಜಾಗವಿದ್ದು, ಅಲ್ಲಿ ಯೋಜನೆ ಜಾರಿಗೊಳಿಸಿ. ಒಂದು ವೇಳೆ ಇಲ್ಲಿಯೇ ಮಾಡಬೇಕೆಂದು ಪಟ್ಟು ಹಿಡಿದಲ್ಲಿ ವಿದ್ಯಾರ್ಥಿಗಳಿಂದ ತೀವ್ರ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಹಾಗೂ ಕುವೆಂಪು ವಿವಿ ಕುಲಪತಿ ಸ್ಥಳಕ್ಕೆ ಆಗಮಿಸುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದು ಕುಳಿತರು. ಪೊಲೀಸರು ಮತ್ತು ಕಾಲೇಜ್ ಆಡಳಿತ ಮಂಡಳಿ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಮನವೊಲಿಸಿದರು. ಪ್ರಾಂಶುಪಾಲರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಜಿಲ್ಲಾಡಳಿತ ಮತ್ತು ವಿವಿ ಕುಲಪತಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದು, ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು ಇದ್ದರು.