Malenadu Mitra
ರಾಜ್ಯ ಶಿವಮೊಗ್ಗ

ಸಂಪದ್ಭರಿತ ದೇಶ ಕಟ್ಟಲು ಪಣ ತೊಡೋಣ: ಶಂಕರಮೂರ್ತಿ

ಕುವೆಂಪು ವಿವಿಯಲ್ಲಿ ೭೫ನೇ ಸ್ವಾತಂತ್ರೋತ್ಸವ ಪ್ರಯುಕ್ತ ಮಾಜಿ ಸಭಾಪತಿ ಉಪನ್ಯಾಸ

ಶಂಕರಘಟ್ಟ, ಆ. 15: ಭಾರತವನ್ನು ಬ್ರಿಟಿಷರು, ಪೋರ್ಚುಗೀಸರು, ಡಚ್ಚರು ಸೇರಿದಂತೆ ಅನೇಕರು ಆಳಿದ್ದಾರೆ, ಸಂಪನ್ಮೂಲಗಳನ್ನು ಹೊತ್ತೊಯ್ದಿದ್ದಾರೆ. ಅದೇ ರೀತಿ ದೇಶವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅವನ್ನು ಬಗೆಹರಿಸಿ ಸಂಪನ್ಮೂಲಗಳನ್ನು ಸೃಷ್ಟಿಸಿ ಸಂಪದ್ಭರಿತ ದೇಶವಾಗಿ ನಿರ್ಮಿಸುವತ್ತ ಹೆಜ್ಜೆಯಿಡೋಣ ಎಂದು ವಿಧಾನ ಪರಿಷತ್‌ನ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.

ಕುವೆಂಪು ವಿವಿಯು ಧ್ವಜಾರೋಹಣ ಕಾರ್ಯಕ್ರಮದ ನಂತರ ಬಸವ ಸಭಾ ಭವನದಲ್ಲಿ ಆಯೋಜಿಸಿದ್ದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಭಾರತವು ಅಹಾರ-ಬೇಳುಕಾಳುಗಳಿಗಾಗಿ ಬೇರೆ ದೇಶಗಳನ್ನು ಆಶ್ರಯಿಸಿತ್ತು. ಹಸಿರು ಕ್ರಾಂತಿ ಮಾಡಿದ ದೇಶ, ಆಹಾರೋತ್ಪನ್ನಗಳನ್ನು ರಫ್ತುಮಾಡುತ್ತಿದ್ದೇವೆ. ದೇಶವು ಸವಾಲುಗಳನ್ನು ಬಗೆಹರಿಸಿ ಸಂಪನ್ಮೂಲಗಳನ್ನು ಸೃಷ್ಟಿಸುವತ್ತ ಮುನ್ನಡೆಯುತ್ತಲಿದೆ. ಆದರೆ ಸಮೃದ್ಧಿ ತಲುಪುವ ಹಾದಿಯತ್ತ ಮತ್ತಷ್ಟು ಬದ್ಧತೆಯಿಂದ, ಯೋಜಿತವಾಗಿ ಹೆಜ್ಜೆಯಿಡುವ ಪಣವನ್ನು ೭೫ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವ ಈ ದಿನ ತೆಗೆದುಕೊಳ್ಳೋಣ ಎಂದರು.

ಸ್ವಾತಂತ್ರ ಪಡೆದಾಗ ಅಲ್ಪಪ್ರಮಾಣದ ಅಕ್ಷರಸ್ಥರು, ಕೆಲವೇ ಶಾಲೆ-ಕಾಲೇಜುಗಳು ಇದ್ದವು. ಇಂದು ಪ್ರತೀ ಜಿಲ್ಲೆಗೊಂದು ವಿವಿ-ಮೆಡಿಕಲ್ ಕಾಲೇಜುಗಳನ್ನು ನಾವು ರೂಪಿಸಿದ್ದೇವೆ. ಅದನ್ನು ಮತ್ತಷ್ಟು ಉಜ್ವಲಮಟ್ಟಕ್ಕೆ ಒಯ್ದು ಎಲ್ಲರನ್ನು ಸುಶಿಕ್ಷಿತರನ್ನಾಗಿ, ಉದ್ಯೋಗಸ್ಥರನ್ನಾಗಿ, ಸುಪ್ರಜೆಗಳನ್ನಾಗಿ ರೂಪಿಸಿ ಸದೃಢ ಭಾರತ ನಿರ್ಮಿಸೋಣ, ಈ ನಿಟ್ಟಿನಲ್ಲಿ ಕಠಿಣ ಹಾದಿ ಕ್ರಮಿಸಲು ಪಣ ತೊಡೋಣ ಎಂದು ನುಡಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಸ್ವಾತಂತ್ರö್ಯ ಪಡೆಯುವಲ್ಲಿ ಗಾಂಧೀ, ನೆಹರೂ, ಅಂಬೇಡ್ಕರ್‌ರಷ್ಟೇ ಪ್ರಮುಖವಾಗಿ ನಾವು ಸ್ಥಳೀಯ ನಾಯಕರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಬ್ಬಕ್ಕ, ಈಸೂರು, ಶಿವಪುರಗಳ ಸ್ವಾತಂತ್ರ ಯೋಧರನ್ನು ನಾವು ನೆನೆದು, ಗೌರವಿಸಬೇಕಿದೆ. ಈ ಸಲುವಾಗಿ ಭಾರತ ಸ್ವಾತಂತ್ರö್ಯದ ಅಮೃತ ಮಹೋತ್ಸವ ಕಾರ್ಯಕ್ರಮದಡಿ ವರ್ಷವಿಡೀ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈಸೂರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಸಲು ಉನ್ನತ ಶಿಕ್ಷಣ ಪರಿಷತ್ ಕುವೆಂಪು ವಿವಿಗೆ ಜವಾಬ್ದಾರಿ ವಹಿಸಿದೆ.

ಯೋಧರಿಗೆ ಸನ್ಮಾನ :

ಭಾರತ ಸೇನೆಯಲ್ಲಿ ೧೫ ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಯೋಧರಾದ ನಾಯ್ಕ್ ಬಿ ವೀರಸ್ವಾಮಿ, ನಾಯ್ಕ್ ರಾಜಶೇಖರ್, ನಾಯ್ಕ್ ದಯಾನಂದ್ ಎಂ., ನಾಯ್ಕ್ ಶಿವಾನಂದ ಮೂರ್ತಿ, ದೇವಸಗಾಯಂ ಅವರುಗಳನ್ನು ಸನ್ಮಾನಿಸಲಾಯಿತು. ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ, ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಎಂ. ತ್ಯಾಗರಾಜ್, ಹಣಕಾಸು ಅಧಿಕಾರಿ ಎಚ್. ರಾಮಕೃಷ್ಣ, ಡಾ. ವೀರೂಪಾಕ್ಷ, ಡಾ. ಪರಿಸರ ನಾಗರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಯ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

Ad Widget

Related posts

ಡಾ. ಪ್ರಸನ್ನಕುಮಾರ್ ಗೆ ಪ್ರತಿಷ್ಠಿತ ವಿಜ್ಹನ್ ಪ್ರಶಸ್ತಿ

Malenadu Mirror Desk

ಸೈದ್ಧಾಂತಿಕ ಸ್ಪಷ್ಟತೆಯ ಗೋಪಾಲಗೌಡರ ರಾಜಕಾರಣ ಯಾವತ್ತೂ ಮಾದರಿ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯ

Malenadu Mirror Desk

ಶಿವಮೊಗ್ಗದಲ್ಲಿ 129 ಸೋಂಕು, 4 ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.