ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಆಗ್ರಹ
ಶರಾವತಿ ಮುಳುಗಡೆ ಸಂತ್ರಸ್ಥರ ಭೂಮಿ ಮಂಜೂರಾತಿ ಡಿನೋಟಿಫಿಕೇಷನ್ ಹೈಕೋರ್ಟ್ ರದ್ದುಗೊಳಿಸಿದ್ದು,ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವಂತೆ ಮಲೆನಾಡು ರೈತ ಹೋರಾಟ ಸಮಿತಿಯ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯದೆ ಅಧಿಸೂಚಿತ ಅರಣ್ಯ ಪ್ರದೇಶವನ್ನು ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ಮಾಡಿದ ಕ್ರಮವನ್ನು ಪ್ರಶ್ನಿಸಿ ಹೊಸನಗರ ತಾಲೂಕಿನ ಜನಸಂಗ್ರಾಮ ಪರಿಷತ್‌ನ ಮುಖಂಡ ಗಿರೀಶ್ ಆಚಾರ್ ಎಂಬುವವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಹೈಕೋರ್ಟ್, ಡಿನೋಟಿಫಿಕೇಷನ್ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂಬುದನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.ಇದರಿಂದ ಶರಾವತಿ ಮುಳುಗಡೆ ಸಂತ್ರಸ್ಥರ ಭೂಮಿ ಹಕ್ಕಿನ ಕನಸು ಭಗ್ನವಾಗಿದೆ.ಶರಾವತಿ ಮುಳುಗಡೆ ಸಂತ್ರಸ್ಥರ ಪರವಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೆಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಶರಾವತಿ ಮುಳುಗಡೆ ರೈತರ ಸಮಸ್ಯೆ ಕಳೆದ ೬೦ ವರ್ಷಗಳಿಂದ ಜೀವಂತವಾಗಿದೆ. ಸುಮಾರು ೨೨ ಸಾವಿರಕ್ಕೂ ಅಧಿಕ ಕುಟುಂಬದವರು ಜಮೀನು ಖಾತೆ ಆಗದೇ, ಹಕ್ಕುಪತ್ರ ಇಲ್ಲದೇ ಬದುಕುತ್ತಿದ್ದಾರೆ. ಅರಣ್ಯ ಅಧಿಕಾರಿಗಳ ಕಿರುಕುಳ, ಕೆಲವು ಕಿಡಿಗೇಡಿಗಳಿಂದ ಬಗರ್ ಹುಕುಂ ಜಮೀನು ರೈತರಿಗೆ ದಕ್ಕುತ್ತಿಲ್ಲ. ನ್ಯಾಯಾಲಯಗಳಿಗೆ ಬೇಕೆಂತಲೇ ಹೋಗಿ ಉಪದ್ರವ ಕೊಡುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಗರ್ ಹುಕುಂ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು ಅಷ್ಟೇಕೆ ಉಸ್ತುವಾರಿ ಸಚಿವರು ಎಲ್ಲರೂ ಕೂಡ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟನ್ನಾಗಿ ಮಾಡಿದ್ದಾರೆ. ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಹೋರಾಟ ಸಮಿತಿ
15 ದಿನಗಳಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆ ಮತ್ತು ಬಗರ್ ಹುಕುಂ ಸಮಸ್ಯೆ ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.ಭೂಮಿ ಸಿಗುವವರೆಗೂ ಹಕ್ಕು ಪತ್ರ ಪಡೆಯುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಮಲೆನಾಡು ರೈತರ ಹೋರಾಟ ಸಮಿತಿ ಈಗಷ್ಟೇ ಅಸ್ತಿತ್ವಕ್ಕೆ ಬಂದಿದ್ದು, ಈ ಸಮಸ್ಯೆಯನ್ನು ೧೫ ದಿನಗಳೊಳಗೆ ಬಗೆಹರಿಸದಿದ್ದರೆ ಜಿಲ್ಲಾದ್ಯಂತ ಹೋರಾಟ ಮುಂದುವರೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಧರ್ಮರಾಜ್, ರಾಜಪ್ಪ ಶೆಟ್ಟಿಕೆರೆ, ಕೃಷ್ಣಮೂರ್ತಿ, ಶಿವಪ್ಪ, ನಾರಾಯಣ, ರಘುಪತಿ, ಹಾಲಪ್ಪ ಮುಂತಾದವರಿದ್ದರು