Malenadu Mitra
ರಾಜ್ಯ ಶಿವಮೊಗ್ಗ

ಹಿಂದುಳಿದ ವರ್ಗಗಳ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಒದಗಿಸಬೇಕು: ಜಯಪ್ರಕಾಶ್ ಹೆಗ್ಡೆ

ಹಿಂದುಳಿದ ವರ್ಗಗಳ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಟಾನ, ಪ್ರಗತಿ ಮತ್ತು ಜಾತಿ ಪ್ರಮಾಣ ಪತ್ರದಲ್ಲಿ ಹೆಸರು ನಮೂದಿಸುವಲ್ಲಿನ ಗೊಂದಲದ ಕುರಿತು ಅಧಿಕಾರಿಗಳ ಸಮಾಲೋಚನಾ ಸಭೆ ನಡೆಸಿದರು.

ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 34918 ವಿದ್ಯಾರ್ಥಿಗಳಿಗೆ ಒಟ್ಟು 3.28 ಕೋಟಿ ರೂ. ವಿದ್ಯಾರ್ಥಿ ವೇತನ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ 75.92 ಲಕ್ಷ ರೂ. ಬಿಡುಗಡೆಯಾಗಿದ್ದು, 7423 ವಿದ್ಯಾರ್ಥಿಗಳಿಗೆ 74.23 ಲಕ್ಷ ರೂ. ವಿದ್ಯಾರ್ಥಿ ವೇತನ ಒದಗಿಸಲಾಗಿದೆ. ಎಸ್‌ಎಸ್‌ಪಿಯಲ್ಲಿ ಸ್ವೀಕೃತವಾದ ಎಲ್ಳಾ ಅರ್ಜಿಗಳಿಗೆ ಅನುದಾನ ಮಂಜೂರು ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಗೊಂದಲ ಸರಿಪಡಿಸಲು ಕ್ರಮ

: ಕೆಲವು ಉಪಜಾತಿಗಳು ಪರಿಶಿಷ್ಟ ಜಾತಿ ಅಥವಾ ಪಂಗಡ ಮತ್ತು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಯೂ ಇದ್ದು, ಅಂತಹ ಜಾತಿಗಳ ಪಟ್ಟಿಯನ್ನು ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದರಿಂದಾಗಿ ಜಾತಿ ಪ್ರಮಾಣ ಪತ್ರ ನೀಡಲು ತೊಡಕುಂಟಾಗುತ್ತಿದ್ದು, ಸರಿಯಾದ ಜಾತಿ ಪ್ರಮಾಣ ಪತ್ರ ದೊರೆಯದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ.

ಎರಡು ಪಟ್ಟಿಯಲ್ಲಿರುವ 17 ಜಾತಿಗಳನ್ನು ಆಯೋಗ ಗುರುತಿಸಿದೆ. ಇದೇ ರೀತಿ ಉಪ ಜಾತಿಗಳ ಬಗ್ಗೆಯೂ ಕೆಲವು ಗೊಂದಲಗಳಿದ್ದು, ಈ ಕುರಿತು ಆಯೋಗ ಸುದೀರ್ಘವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಕೆಲವು ಸಣ್ಣ ಜಾತಿಗಳಿಗೆ ಮೀಸಲಾತಿಯಲ್ಲಿ ಸೇರಿರುವ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದಿರುವ ಕಾರಣ ಫಲಾನುಭವವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಸಮಸ್ಯೆ ಕುರಿತು ಚರ್ಚಿಸಲು ಪ್ರತ್ಯೇಕ ಸಭೆಯನ್ನು ಕರೆಯಲಾಗುವುದು ಎಂದು ಹೇಳಿದರು.
ಪ್ರಸ್ತಾವನೆ ಸಲ್ಲಿಕೆ: ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ದುರಸ್ತಿ ಹಾಗೂ ನಿರ್ವಹಣೆಗಾಗಿ 10 ಕೋಟಿ ರೂ. ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ತಿಳಿಸಿದರು.

ಕೆಲವು ವಿದ್ಯಾರ್ಥಿ ನಿಲಯಗಳು ಸೋರುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹ ವಿದ್ಯಾರ್ಥಿ ನಿಲಯಗಳನ್ನು ಗುರುತಿಸಿ ದುರಸ್ತಿಗಾಗಿ ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅಧ್ಯಕ್ಷರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್, ಆಯೋಗದ ಸದಸ್ಯರಾದ ಕಲ್ಯಾಣ್ ಕುಮಾರ್, ಬಿ.ಎಸ್.ರಾಜಶೇಖರ್, ಕೆ.ಟಿ.ಶಿವಣ್ಣ, ಅರುಣ್ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು

Ad Widget

Related posts

ಭದ್ರಾವತಿಯಲ್ಲಿ ಕೆಜಿಗಟ್ಟಲೇ ಗಾಂಜಾ ವಶ : ಮೂವರ ಬಂಧನ

Malenadu Mirror Desk

ಕಾಗೋಡು ತಿಮ್ಮಪ್ಪ ಯೋಗಕ್ಷೇಮ ವಿಚಾರಿಸಿದ ಹೋಮ್ ಮಿನಿಸ್ಟರ್

Malenadu Mirror Desk

ಕುಮಾರ್ ಬಂಗಾರಪ್ಪ ಗೆದ್ದರೆ ಸಚಿವರಾಗ್ತಾರೆ: ಯಡಿಯೂರಪ್ಪ, ಆನವಟ್ಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಯಿಂದ ಪ್ರಚಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.