ಜನಾಶೀರ್ವಾದ ಯಾತ್ರೆ ಮೂಲಕ ಬಿಜೆಪಿಯವರು ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ತಾವೇ ಮಾಡಿದ ಕೋವಿಡ್ ನಿಯಮಗಳನ್ನು ತಾವೇ ಉಲ್ಲಂಘಿಸುತ್ತಿದ್ದಾರೆ.ಕೋವಿಡ್ ಹರಡಲು ಆಡಳಿತ ಪಕ್ಷದವೇ ಕಾರಣ ಎಂದು ದೂರಿದರು.
ಕೊರೋನಾ ಅಲೆಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೊರೊನಾ ಮೂರನೇ ಅಲೆಯ ಭೀತಿ ಜನರನ್ನು ಆವರಿಸಿದ್ದರೂ ಕೂಡ ಬಿಜೆಪಿ ಪಕ್ಷಕ್ಕೆ ಇದರ ಅರಿವೇ ಇಲ್ಲ ಎಂದರು.
ಭಾರತವನ್ನು ಬಿಜೆಪಿ ಬೀದಿಗೆ ತಳ್ಳುತ್ತಿದೆ ಎಂದ ಅವರು,ಬೆಲೆ ಏರಿಕೆ, ಭ್ರಷ್ಟಾಚಾರಗಳಿಂದ ಭವ್ಯ ಭಾರತ ತುಂಬಿ ತುಳುಕುತ್ತಿದ್ದು,ಖಾಸಗೀಕರಣದ ಹೊಡೆತಕ್ಕೆ ಸಿಕ್ಕ ಮೇಲೆ ಮಧ್ಯಮ ಮತ್ತು ಬಡವರು ಜೀವನ ಮಾಡುವುದೇ ಕಷ್ಟವಾಗುತ್ತಿದೆ. ಬಿಜೆಪಿ ಆಡಳಿತದಲ್ಲಿ ಬಡವರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ನೋಟ್ ಬ್ಯಾನ್ ನಿಂದ ಹಿಡಿದು ಜಿ.ಎಸ್.ಟಿ.ವರೆಗೆ ಅವೈಜ್ಞಾನಿಕ ನೀತಿಗಳಿಂದಾಗಿ ಆಡಳಿತ ವೈಫಲ್ಯ ಕಂಡಿದೆ ಎಂದು ಆರೋಪಿಸಿದರು.
ಉದ್ಯೋಗಗಳು ಸೃಷ್ಠಿಯಾಗುವುದಿರಲಿ ಶೇಕಡ ೫೦ ಉದ್ಯೋಗ ಕಡಿತವಾಗಿವೆ. ಜನ ವಿರೋಧಿ ಕಾಯ್ದೆಗಳೇ ವಿಜೃಂಭಿಸುತ್ತಿವೆ. ಅಡುಗೆ ಅನಿಲ ಸೇರಿದಂತೆ ತೈಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬದುಕು ದುಸ್ತರವಾಗಿದೆ. ಕಾರ್ಪೊರೇಟ್ ಕಂಪನಿಗಳಿಗೆ ಮಣೆ ಹಾಕುತ್ತಾ ದೇಶದ ಸಂಪತ್ತು ಕೆಲವೇ ಕೆಲವು ಶ್ರೀಮಂತರ ಕೈಯಲ್ಲಿದೆ. ಕಾರ್ಪೋರೇಟ್ ಸಂಸ್ಥೆಗಳ ಗುಲಾಮರಂತೆ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮಹಿಳೆಯರ ಶೋಷಣೆ, ದಲಿತರ ಮೇಲೆ ಹಲ್ಲೆ ನಿರಂತರವಾಗಿ ಮುಂದುವರೆದಿದೆ. ರೈತರ ಬದುಕನ್ನು ಅಕ್ಷರಶಃ ಕಸಿದುಕೊಂಡಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸುತ್ತಾ ಬಂದಿದ್ದರೂ ಕೂಡ ಯಾವ ಪ್ರಯೋಜನವೂ ಆಗುತ್ತಿಲ್ಲ. ಮೋದಿಯ ಅಚ್ಛೇ ದಿನಗಳು ಎಂದೋ ಮುಗಿದು ಹೋಗಿವೆ. ಮೋದಿಯ ಭಕ್ತರು ಸುಳ್ಳುಗಳನ್ನೇ ನಂಬುವಂತೆ ಜನರನ್ನು ಭಾವನಾತ್ಮಕ ವಿಷಯಗಳಿಂದ ಮೋಸ ಮಾಡುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯೆ ಮೆಹಕ್ ಶರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಭೂಪಾಲ್, ಪ್ರಮುಖರಾದ ಮಾರ್ಟಿಸ್, ಎನ್.ಡಿ. ಪ್ರವೀಣ್, ಮಾಲತೇಶ್, ಚಂದನ್, ಪ್ರಕಾಶ್, ಪ್ರವೀಣ್, ರಾಜು ಇದ್ದರು.