ಶಿವಮೊಗ್ಗ ನಗರದಲ್ಲಿ ಬಿಜೆಪಿ ಆಡಳಿತದ ತೆರಿಗೆ ಭಯೋತ್ಪಾದನೆ ಖಂಡಿಸಿ ಆ.25 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಶಿವಮೊಗ್ಗ ಮಹಾನಗರ ಪಾಲಿಕೆ ನಗರದಲ್ಲಿನ ಆಸ್ತಿಗಳ ತೆರಿಗೆ ಹೆಚ್ಚಿಸಿರುವುದನ್ನು ಕೂಡಲೇ ಹಿಂಪಡೆಯಬೇಕು. ಕಳೆದ ಒಂದೂವರೆ ವರ್ಷದಿಂದ ಜನರು ಕೋವಿಡ್‌ನಿಂದಾಗಿ ದುಡಿಮೆ ಇಲ್ಲದೇ ಪರಿತಪಿಸುತ್ತಿದ್ದಾರೆ. ಹಿಂದಿದ್ದ ತೆರಿಗೆಯನ್ನೇ ಪಾವತಿಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ನಗರಪಾಲಿಕೆ ಆಸ್ತಿ ತೆರಿಗೆಯನ್ನು ಹೆಚ್ಚಿಸಲು ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವರ್ಷದಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆಯನ್ನು ಶೇ.15ರಷ್ಟು ಹೆಚ್ಚಿಸಲಾಗಿದೆ. ಇದರ ಜೊತೆಗೆ ಪ್ರತಿ ವರ್ಷ ಶೇ.5ರಷ್ಟು ತೆರಿಗೆ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು.
ಈ ಅವೈಜ್ಞಾನಿಕ ತೆರಿಗೆ ಏರಿಕೆ ಖಂಡಿಸಿ ಶಿವಮೊಗ್ಗದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಪ್ರತಿಭಟನೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ. ಈ ಹೋರಾಟದಲ್ಲಿ ಕಾಂಗ್ರೆಸ್ ಕೂಡಾ ಭಾಗವಹಿಸಲಿದೆ. ಸಚಿವ ಈಶ್ವರಪ್ಪ ಅವರು, ಕೇಳಲು ಹೋದ ಜನತೆಗೆ ಎಲ್ಲಾ ಸರಿಯಿದೆ ಎಂದು ಹೇಳಿ ಕಳಿಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಜನರ ಮೇಲೆ ಹೊರೆ ಹೇರುತ್ತಿರುವ ಪಾಲಿಕೆ ವಿರುದ್ಧ ಚೇಂಬರ್ ಆಫ್ ಕಾಮರ್ಸ್ ಕೂಡಾ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ನಾಗರಿಕರು ಕೆಲಸ ಇಲ್ಲದೆ ಪರಿತಪಿಸುತ್ತಿದ್ದಾರೆ. ಜೀವನವೇ ಕಷ್ಟ ಇರುವಾಗ ಈಗ ತೆರಿಗೆ ಹೊರೆ ಹೇರುವುದು ಸರಿಯಲ್ಲ. ಇದನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನೆಗೆ ನಾಗರಿಕರು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ಕೋರಿದರು.
ಮಹಾನಗರಪಾಲಿಕೆ ಪ್ರತಿಪಕ್ಷ ನಾಯಕರಾದ ಯಮುನಾರಂಗೇಗೌಡ, ಸದಸ್ಯರಾದ ರೇಖಾ ರಂಗನಾಥ್, ಮುಖಂಡರಾದ ಆರ್.ಸಿ.ನಾಯ್ಕ, ಶಾಮಸುಂದರ್, ಉಮೇಶ್, ದೀಪಕ್ ಸಿಂಗ್ ಮತ್ತಿತರರಿದ್ದರು.
next post