ಶಿವಮೊಗ್ಗಅವೈಜ್ಞಾನಿಕ ಮತ್ತು ಅಸಂಬದ್ಧ ಆಸ್ತಿ ತೆರಿಗೆ ವಿರೋಧಿಸಿ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮಹಾನಗರಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪಾಲಿಕೆ ಮುಂಭಾಗದ ಪ್ರವೇಶ ದ್ವಾರದಲ್ಲಿಯೇ ಪೊಲೀಸರು ತಡೆಹಿಡಿದರು.
ಪಾಲಿಕೆ ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಏರಿಸಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿ ಕೋವಿಡ್ ಸಾಂಕ್ರಾಮಿಕದ ವಿಷಮ ಪರಿಸ್ಥಿತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿದರು.
ಕೋವಿಡ್ ಸಂಕಷ್ಟದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಿದ್ದು, ಆದರೆ, ಕರ್ನಾಟಕದಲ್ಲಿ ಮಾತ್ರ ತೆರಿಗೆಯನ್ನು ಹೆಚ್ಚಿಸಲಾಗಿದೆ. ಅದರಲ್ಲೂ ಶಿವಮೊಗ್ಗದಲ್ಲಿ ಆಸ್ತಿ ತೆರಿಗೆ ಅತ್ಯಂತ ದುಬಾರಿಯಾಗಿದೆ. ಅದು ಹೇಗೆ ನಿರ್ಧಾರ ಮಾಡಿದ್ದಾರೋ ನಿರ್ಧಾರ ಮಾಡಿದ್ದವರಿಗೆ ಗೊತ್ತಿಲ್ಲ. ಒಂದೊಂದು ರೋಡಿಗೆ ಒಂದೊಂದು ತೆರಿಗೆ ಇದೆ. ತೆರಿಗೆ ಹೆಚ್ಚಳ ಶೇ.೧೦೦ ಕ್ಕೂ ಹೆಚ್ಚಿದೆ. ಮುಂದೊಂದು ದಿನ ಆಸ್ತಿ ಮಾರಿ ತೆರಿಗೆ ಕಟ್ಟುವಂತಹ ಸ್ಥಿತಿ ಬಂದರೆ ಆಶ್ಚರ್ಯವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕೋವೀಡ್ ಸಂಕಷ್ಟಕ್ಕೆ ಜನರು ತುತ್ತಾಗಿದ್ದಾರೆ. ಇತಂಹ ಸಂದರ್ಭದಲ್ಲಿ ತೆರಿಗೆಯನ್ನೇ ರದ್ದು ಮಾಡಬೇಕಿತ್ತು. ಆದರೆ ಪಾಲಿಕೆಯು ತೆರಿಯನ್ನು ಏರಿಸಿ ಇದು ಸರ್ಕಾರದ ನೀತಿ ಎನ್ನುತ್ತಿದ್ದಾರೆ. ಈ ತೆರಿಗೆ ಪಾಲಿಸಿ ಬೆಂಗಳೂರಿಗೆ ಮಾತ್ರ ಅನ್ವಯಿಸುವುದಿಲ್ಲ. ಏಕೆಂದರೆ ಅವೈಜ್ಞಾನಿಕವಾಗಿ ಎಸ್.ಆರ್. ದರ ಆಧರಿಸಿ ತೆರಿಗೆಯನ್ನು ವಿಧಿಸಲಾಗಿದೆ ಎಂದು ಆರೋಪಿಸಿದರು.
ಖಾಲಿ ನಿವೇಶನಗಳಿಗೂ ತೆರಿಗೆ ಏರಿಕೆಯಾಗಿದೆ. ಸಂಕಷ್ಟದ ವರ್ಷದಲ್ಲಿ ತೆರಿಗೆ ಹೆಚ್ಚಿಸಿರುವುದು ಯಾವುದೇ ಕಾರಣಕ್ಕೂ ತರವಲ್ಲ. ಕೂಡಲೇ ತೆರಿಗೆ ಇಳಿಸಬೇಕು. ಎಸ್.ಆರ್.ದರ ನಿಗದಿಮಾಡಬಾರದು ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಮೇಯರ್ ಸೇರಿದಂತೆ ಎಲ್ಲ ಸದಸ್ಯರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರಿಂದ ಮನವಿ ಪಡೆದರು. ಮನವಿ ಸ್ವೀಕರಿಸಿದ ಮೇಯರ್ ಸುನಿತಾ ಅಣ್ಣಪ್ಪ ಅವರು, ಈಗಾಗಲೇ ಶೇಕಡ ೬೦ ರಷ್ಟು ನಾಗರಿಕರು ತೆರಿಗೆ ಕಟ್ಟಿದ್ದು, ತೆರಿಗೆ ಕಟ್ಟಲು ಪಾಲಿಕೆ ಒತ್ತಾಯ ಮಾಡುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಬಿ.ವಿ.ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ ಕುಮಾರ್, ಅಣ್ಣಾ ಹಜಾರೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಯಾದವ್, ಪ್ರಮುಖರಾದ ಡಾ. ಚಿಕ್ಕಸ್ವಾಮಿ, ಎಸ್.ಬಿ. ಅಶೋಕ್ ಕುಮಾರ್, ಡಾ. ಸತೀಶ್ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯ, ಸೀತಾರಾಮ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಸುದೇವ್, ಶಂಕರಪ್ಪ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ರಮೇಶ್ ಹೆಗ್ಡೆ, ಯಮುನಾ ರಂಗೇಗೌಡ ಹಾಗೂ ಕಾಂಗ್ರೆಸ್ ಮುಖಂಡರು ಸೇರಿದಂತೆ ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ನೂರಾರು ತೆರಿಗೆದಾರರು ಭಾಗವಹಿಸಿದ್ದರು.