ಕಾಲೇಜಿಗೆ ಹೋಗಿದ್ದ ಮಕ್ಕಳು ಮನೆಗೆ ಬರುವರೆಂದು ಆ ಪೋಷಕರು ಕಾದಿದ್ದರು. ಆದರೆ ವಿದಿಯಾಟವೇ ಬೇರೆ ಇತ್ತು. ಊಟಕ್ಕೆ ತಯಾರು ಮಾಡಿಕೊಂಡಿದ್ದ ತಂದೆ ತಾಯಿಗಳಿಗೆ ಮಕ್ಕಳು ಬಾರದಲೋಕಕ್ಕೆ ಹೋಗಿರುವ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ.
ಇದು ಭದ್ರಾವತಿ ತಾಲೂಕು ಗೊಂದಿ ಚೆಕ್ ಡ್ಯಾಮ್‌ನಲ್ಲಿ ಈಜಲು ಹೋಗಿ ಸಾವುಕಂಡ ಮಕ್ಕಳ ಪೋಷಕರ ಕರುಣಾಜನಕ ಕತೆ. ಶಿವಮೊಗ್ಗ ತಾಲೂಕು ಕೊಮ್ಮನಾಳಿನ ಶಶಾಂಕ್ ಹಾಗೂ ಗಾಡಿಕೊಪ್ಪದ ಕಿರಣ್ ಅವರ ದುರಂತ ಸಾವಿನ ಹೃದಯ ವಿದ್ರಾವಕ ಘಟನೆ ಇದು. ಶಿವಮೊಗ್ಗದ ಎಜುರೈಟ್ ಕಾಲೇಜಿನಲ್ಲಿ ಎಂಬಿಎ ಅಭ್ಯಾಸ ಮಾಡುತ್ತಿದ್ದ ಮೃತ ಕಿರಣ್, ಶಶಾಂಕ್ ಮತ್ತು ಇತರೆ ಮೂವರು ಸೇರಿ ಒಟ್ಟು ಐದು ಮಂದಿ ಶನಿವಾರ ವೀಕೆಂಡ್ ಎಂದು ಭದ್ರಾನದಿಯ ತಟಕ್ಕೆ ಪಿಕ್‌ನಿಕ್ ಹೋಗಿದ್ದಾರೆ. ಗೊಂದಿ ನಾಲೆಯ ಚೆಕ್ ಡ್ಯಾಂ ಬಳಿ ಹೋದ ಐವರೂ ಅಲ್ಲೇ ಕಾಲ ಕಳೆದಿದ್ದಾರೆ. ಕಿರಣ್ ಮತ್ತು ಶಶಾಂಕ್ ತಮಗೆ ಈಜು ಬರುತ್ತಿದ್ದ ಕಾರಣ ನಾಲೆಗಿಳಿದು ಈಜಾಟ ಆರಂಭಿಸಿದ್ದಾರೆ. ಆದರೆ ಉಳಿದ ಮೂವರು ಈಜು ಬಾರದ ಕಾರಣ ದಡದಲ್ಲಿಯೇ ಕುಳಿತಿದ್ದಾರೆ.
ಸುಳಿಯ ಸೆಳೆತ
ನೀರಿಗಿಳಿದ ಇಬ್ಬರು ಗೆಳೆಯರು ಇದ್ದಕ್ಕಿದ್ದಂತೆ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ. ನೀರಿನ ಸುಳಿಯ ಸೆಳೆತಕ್ಕೆ ಸಿಕ್ಕ ಮಿತ್ರರು ನೆರವಿಗೆ ಕೂಗಿಕೊಂಡಿದ್ದಾರೆ.ಒಡನಾಡಿಗಳು ಮುಳುಗುವುದನ್ನು ಕಂಡ ಮೂವರು ಮಿತ್ರರು ರೋದಿಸುತ್ತ ನೆರವಿಗಾಗಿ ಅಂಗಲಾಚಿದ್ದಾರೆ. ಹುಡುಗರ ಕೂಗು ಕೇಳಿ ನಾಲೆ ಅಕ್ಕಪಕ್ಕದಲ್ಲಿದ್ದ ಜನರು ಬಂದರಾದರೂ ಅಷ್ಟೊತ್ತಿಗಾಗಲೇ ಇಬ್ಬರೂ ವಿದ್ಯಾರ್ಥಿಗಳು ಮುಳುಗಿಹೋಗಿದ್ದರು.
ವಿಷಯ ತಿಳಿದ ಭದ್ರಾವತಿ ಗ್ರಾಮಾಂತರ ಪೊಲೀಸರು, ಸ್ಥಳಕ್ಕೆಬಂದು ಪರಿಶೀಲನೆ ನಡೆಸಿ ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕದಳದ ನೆರವಿನಿಂದ ಮೃತ ದೇಹಗಳನ್ನು ಮೇಲಕೆತ್ತಿದ್ದಾರೆ.
ಹೆತ್ತವರ ಆಕ್ರಂದನ:
ಮಕ್ಕಳು ಕಾಲೇಜಿಗೆ ಹೋಗಿ ಬರುತ್ತಾರೆಂದುಕೊAಡಿದ್ದ ಪೋಷಕರಿಗೆ ಮಕ್ಕಳು ಸಾವಿನ ಸುದ್ದಿ ದೊಡ್ಡ ಆಘಾತ ನೀಡಿದೆ. ಹುಡಿಗಾಟಿಕೆಗೆ ಪಿಕ್‌ನಿಕ್ ಹೋಗಿದ್ದು, ಸರಿ ಆದರೆ ಅಪರಿಚಿತ ಸ್ಥಳದಲ್ಲಿ ನೀರಿಗಿಳಿದು ಬಾಳಿಬದುಕಬೇಕಾಗಿರುವ ಎಳೆ ಜೀವಗಳು ಅನ್ಯಾಯವಾಗಿ ಬಾರದ ಲೋಕಕ್ಕೆ ಹೋಗಿವೆ. ಪೋಷಕರ ಕಣ್ಣು ತಪ್ಪಿಸಿ ಪಿಕ್‌ನಿಕ್ ಹೋಗುವ ಮತ್ತು ದುಸ್ಸಾಹಸಕ್ಕೆ ಕೈ ಹಾಕುವ ವಿದ್ಯಾರ್ಥಿಗಳಿಗೆ ಇದೊಂದು ಪಾಠವಾಗಿದೆ. ಇನ್ನಾದರೂ ಇಂತಹ ಅನ್ಯಾಯದ ಸಾವುಗಳು ನಿಲ್ಲಲಿ ಎಂಬುದು ಎಲ್ಲರ ಆಶಯವಾಗಿದೆ.