ಅದೊಂದು ಭಾವಪೂರ್ಣ ಸಮಾರಂಭ, ಚೌತಿ ಹಬ್ಬಕ್ಕೆ ತವರಿಗೆ ಬಂದಿದ್ದ ಹೆಣ್ಣು ಮಕ್ಕಳು ಜತೆಗೆ ತಮ್ಮ ಪತಿಯಂದಿರನ್ನೂ ಕರೆದುಕೊಂಡು ಬಂದು ಉಡಿತುಂಬಿಸಿಕೊಂಡರು. ಊರಿನ ಅಳಿಯಂದಿರು ಸುಮ್ಮನೆ ಮಾವನ ಮನೆಗೆ ಬಂದು ಊರಿನ ಜನ ನೀಡಿದ ಪ್ರೀತಿಯ ಗೌರವ ಸ್ವೀಕರಿಸಿದರು. ಇಲ್ಲಿನ ಹೆಣ್ಣನ್ನು ಮನೆದುಂಬಿಕೊಂಡು ಊರಿನ ಅಳಿಯಂದಿರಾಗಿದ್ದಕ್ಕೆ ಸಾಗರದ ಋಣ ತೀರಿಸುವ ಜವಾಬ್ದಾರಿಯೂ ಇದೆ ಎಂದು ಹೇಳಿದರು. ಈ ಭಾವನಾತ್ಮಕ ಕಾರ್ಯಕ್ರಮ ನಡೆದದ್ದು, ಶಿವಮೊಗ್ಗ ಜಿಲ್ಲೆ ಸಾಗರ ನಗರದಲ್ಲಿ. ರಾಜ್ಯ ಸರಕಾರದ ನೂತನ ಸಚಿವರಾದ ಶಿಕ್ಷಣ ಸಚಿವ ನಾಗೇಶ್ ಹಾಗೂ ಇಂಧನ ಸಚಿವ ಸುನೀಲ್ ಕುಮಾರ್ ಅವರನ್ನು ಭಾರತೀಯ ಜನತಾ ಪಕ್ಷದಿಂದ ಶನಿವಾರ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ರೂವಾರಿ ಶಾಸಕ ಹರತಾಳು ಹಾಲಪ್ಪ ಅವರು, ನಮ್ಮೂರಿನ ಅಳಿಯಂದಿರು ಉನ್ನತ ಹುದ್ದೆಯಲ್ಲಿರುವಾಗ ಅವರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯವಾಗಿದೆ. ಈ ಕಾರಣದಿಂದ ಅವರಿಗೆ ಗೌರವ ಸಮರ್ಪಣೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಚಿವರು ಸರಕಾರ ಮಟ್ಟದಲ್ಲಿ ಸಾಗರ ಕ್ಷೇತ್ರಕ್ಕೆ ಆಗಬೇಕಿರುವ ಕೆಲಸಗಳನ್ನು ಆದ್ಯತೆಯ ಮೇಲೆ ಮಾಡಿಕೊಡಬೇಕೆಂಬ ಮನವಿಯನ್ನೂ ಮಾಡಿದರು.
ಪತ್ನಿ ಪ್ರಿಯಾಂಕ ಸಮೇತರಾಗಿ ಸನ್ಮಾನ ಸ್ವೀಕರಿಸಿದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಮಾತನಾಡಿ, ಇಲ್ಲಿಯ ನೆಲ ಸಂಸ್ಕಾರವನ್ನು ಕೊಟ್ಟಿದೆ ಜತೆಗೆ ಹೋರಾಟವನ್ನೂ ಕಲಿಸಿದೆ. ಸಾಗರದಲ್ಲಿ ಸೈಕಲ್ ತುಳಿದು ಓಡಾಟ ಮಾಡುತ್ತಿದ್ದ ನಾನು ಇಂದು ಸಚಿವನಾಗಿ ಇಲ್ಲಿಗೆ ಬಂದಿರುವುದರ ಹಿಂದೆ ಮಾರ್ಗದರ್ಶನ ನೀಡಿದ ಅನೇಕ ಹಿರಿಯರ ಪರಿಶ್ರಮವಿದೆ ಎಂದ ಅವರು ಜವಾಬ್ದಾರಿ ಹೊತ್ತು ಇಲ್ಲಿಗೆ ಬಂದಿದ್ದೇನೆ ಹಾಗಾಗಿ ಇಲ್ಲಿಯ ಸಮಸ್ಯೆಗಳ ಕುರಿತು ವಿಶೇಷ ಆದ್ಯತೆ ನೀಡುವುದು ಕೂಡ ನನ್ನ ಜವಾಬ್ದಾರಿ, ಸದಾ ಕಾರ್‍ಯಕರ್ತರ ಸಚಿವನಾಗಬೇಕು ಎನ್ನುವ ಬಯಕೆ ನನ್ನದಾಗಿದೆ ಇದರಿಂದಾಗಿ ಜನ ಸಾಮಾನ್ಯರ ಸಚಿವನಾಗಲು ಸಾಧ್ಯ ಎಂದರು.
ಪತ್ನಿ ವೀಣಾ ಅವರೊಂದಿಗೆ ಸನ್ಮಾನ ಸ್ವೀಕರಿಸಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾತನಾಡಿ, ರಾಜಕೀಯ ಆಸಕ್ತಿ ಇಲ್ಲದಿದ್ದರೂ ಈಗ ರಾಜಕೀಯದಲ್ಲಿ ಬೆಳೆಯುವಂತೆ ಮಾಡಿರುವುದು ಬಿಜೆಪಿಯ ಸಂಘಟನೆಯ ಶಕ್ತಿ, ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬರುತ್ತಿರುವ ಹೊಸ್ತಿಲಿನಲ್ಲಿ ಶಿಕ್ಷಣ ಇಲಾಖೆಯಲ್ಲಿಯ ಕೆಲಸ ಸಂತಸ ತಂದಿದೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಸಿದ್ಧಾಂತಕ್ಕಾಗಿ ಬದುಕಿದ ನಾವು ಹುದ್ದೆಗಾಗಿ ಆಸೆಪಟ್ಟವರಲ್ಲ, ಜತೆಗೆ ಅಂತಹ ಆಸೆ ಪಡುವ ಮೂಲಕ ಬೆಳೆಸಿದ ಪಕ್ಷಕ್ಕೆ ಗಾಯವನ್ನು ಎಂದೂ ಮಾಡಬಾರದು. ನಮಗಿಂತ ದೇಶ ದೊಡ್ಡದು, ಅದಕ್ಕೆ ಗೌರವ ನೀಡುವ ರೀತಿಯಲ್ಲಿ ನಮ್ಮ ನಡವಳಿಕೆ ಇರಬೇಕು ಮತ್ತು ಪಕ್ಷ ಕೊಟ್ಟ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸುವ ಒಳ್ಳೆಯತನ ರೂಢಿಸಿಕೊಂಡರೆ ಆಗ ಹುದ್ದೆ ಹುಡುಕಿ ಬರಲಿದೆ ಎಂದರು. ಶಾಸಕ ಹರತಾಳು ಹಾಲಪ್ಪ ಅಧ್ಯಕ್ಷತೆವಹಿಸಿದ್ದರು. ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಶಾಸಕ ಬಿ.ಸ್ವಾಮಿರಾವ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ದತ್ತಾತ್ರೀ, ಆರ್‍ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎಸ್.ಅರುಣ್, ನಗರ ಸಭಾಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ.ಮಹೇಶ್, ಕೆ.ಆರ್. ಗಣೇಶ್ ಪ್ರಸಾದ್, ಲೋಕನಾಥ್ ಬಿಳಿಸಿರಿ, ಸಂತೋಷ್ ಶೇಟ್, ಪ್ರಿಯಾಂಕ್ ಸುನಿಲ್ ಕುಮಾರ್, ವೀಣಾ ನಾಗೇಶ್ ಮತ್ತಿತರರು ಇದ್ದರು.
ಸಿದ್ಧಾಂತಕ್ಕಾಗಿ ಬದುಕಿದ ನಾವು ಹುದ್ದೆಗಾಗಿ ಆಸೆಪಟ್ಟವರಲ್ಲ, ಜತೆಗೆ ಅಂತಹ ಆಸೆ ಪಡುವ ಮೂಲಕ ಬೆಳೆಸಿದ ಪಕ್ಷಕ್ಕೆ ಗಾಯವನ್ನು ಎಂದೂ ಮಾಡಬಾರದು– ಆರಗ ಜ್ಞಾನೇಂದ್ರ ,ಗೃಹ ಸಚಿವ
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬರುತ್ತಿರುವ ಹೊಸ್ತಿಲಿನಲ್ಲಿ ಶಿಕ್ಷಣ ಇಲಾಖೆಯಲ್ಲಿಯ ಕೆಲಸ ಸಂತಸ ತಂದಿದೆ
– ಬಿ.ಸಿ. ನಾಗೇಶ್ ,ಶಿಕ್ಷಣ ಸಚಿವ
. ಸಾಗರದಲ್ಲಿ ಸೈಕಲ್ ತುಳಿದು ಓಡಾಟ ಮಾಡುತ್ತಿದ್ದ ನಾನು ಇಂದು ಸಚಿವನಾಗಿ ಇಲ್ಲಿಗೆ ಬಂದಿರುವುದರ ಹಿಂದೆ ಮಾರ್ಗದರ್ಶನ ನೀಡಿದ ಅನೇಕ ಹಿರಿಯರ ಪರಿಶ್ರಮವಿದೆ – ಸುನಿಲ್ ಕುಮಾರ್ ,