ಅಬಕಾರಿ ಇಲಾಖೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಗ್ರಾಮಸಭೆ ನಿರ್ಣಯ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ತೂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇದನ್ನು ಕುಡಿದು ಎರಡು ದಿನದ ಅವಧಿಯಲ್ಲಿ ಇಬ್ಬರು ಯುವತಿಯರು ಜೀವ ಕಳೆದುಕೊಂಡಿದ್ದಾರೆ.
ಅಕ್ರಮ ಮದ್ಯ ಮಾರಾಟದಿಂದ ತಮ್ಮೂರಿನ ಯುವತಿಯರು ನಿಧನರಾಗಿದ್ದರಿಂದ ತೂದೂರು ಪಂಚಾಯಿತಿಯಲ್ಲಿ ಅಬಕಾರಿ ಇಲಾಖೆಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ಣಯ ಕೈಗೊಳ್ಳಲಾಗಿದೆ. ಅಕ್ರಮ ಮದ್ಯ ತಡೆಯದ ಅಬಕಾರಿ ಇಲಾಖೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಗ್ರಾಮಸಭೆಯಲ್ಲಿ ಒತ್ತಾಯ ಮಾಡಿದ್ದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುರಾಜ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಸಭೆ ಅಬಕಾರಿ ಇಲಾಖೆ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದೆ.
ಅಬಕಾರಿ ಅಧಿಕಾರಿಗಳನ್ನು ಸಭೆಗೆ ಕರೆಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಸಭೆಗೆ ಆಗಮಿಸಿದ ಅಬಕಾರಿ ಇಲಾಖೆ ನಿರೀಕ್ಷಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಅಧಿಕಾರಿಗಳು ಮದ್ಯಮಾರಾಟ ತಡೆಯದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು, ತೂದೂರು ಗ್ರಾಮ ಪಂಚಾಯಿತಿಯ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರಿದ್ದಾರೆ. ಕಳೆದ ಎರಡು ದಿನದ ಅವಧಿಯಲ್ಲಿ ಅಕ್ರಮ ಮದ್ಯ ಸೇವಿಸಿ ೨೦ ವರ್ಷದ ಇಬ್ಬರು ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ. ಗ್ರಾಮಗಳಲ್ಲಿ ಅಕ್ರಮವಾಗಿ ಥರ್ಡ್ಸ್ ಮದ್ಯ ಮಾರಾಟವಾಗುತ್ತಿದ್ದು, ಇದು ಜೀವಕ್ಕೆ ಕುತ್ತು ತರುತ್ತದೆ. ಅಬಕಾರಿ ಇಲಾಖೆ ನಿರ್ಲಕ್ಷದಿಂದ ಹೀಗಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಕ್ರಮ ಮದ್ಯ ತಡೆಯದ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಮತ್ತು ಎಸಿಬಿ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.