ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲದ ಉಪ್ಪಾರ ಸಂಘದ ಸಮುದಾಯ ಭವನದ ಉದ್ಘಾಟನೆ ಮಾಡಬಾರದು ಎಂದು ಸಂಘದ ಉಪಾಧ್ಯಕ್ಷ ಎನ್. ಮಂಜುನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಪ್ಪಾರ ಸಂಘದಲ್ಲಿ ತಪ್ಪುಗಳು ನಡೆದಿವೆ. ಕಳೆದ ೨೦ ವರ್ಷದಿಂದ ಸರ್ವ ಸದಸ್ಯರ ಸಭೆ ನಡೆಸಿಲ್ಲ. ಲೆಕ್ಕಪತ್ರ ಕೊಟ್ಟಿಲ್ಲ. ಅನುಮೋದನೆ ಪಡೆದಿಲ್ಲ. ಜಿಲ್ಲಾದ್ಯಂತ ಹೊಸ ಸದಸ್ಯತ್ವ ನೋಂದಣಿ ಮಾಡಿಲ್ಲ. ಇದು ಕಾನೂನಿನ ಉಲ್ಲಂಘನೆಯಾಗಿದೆ. ಈ ಬಗ್ಗೆ ಸಭೆಯಲ್ಲಿ ಪ್ರಶ್ನೆ ಮಾಡಿದ ತಮ್ಮನ್ನು ಮತ್ತು ಪ್ರಧಾನ ಕಾರ್ಯದರ್ಶಿ ಯು.ಕೆ. ವೆಂಕಟೇಶ್ ಅವರನ್ನು ಸಂಘದಿಂದ ಕಾನೂನು ಬಾಹಿರವಾಗಿ ಉಚ್ಛಾಟಿಸಿರುವುದನ್ನು ನಾವು ಖಂಡಿಸುತ್ತೇವೆ ಎಂದರು.
ಇದಲ್ಲದೇ, ಜಿಲ್ಲಾ ಉಪ್ಪಾರ ಸಂಘದ ಮೂವರು ಉಪಾಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ ೧೬ ನಿರ್ದೇಶಕರ ವಿರುದ್ಧ ಸಹಕಾರ ಇಲಾಖೆಯ ಡಿಆರ್ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಹಣಕಾಸು ದುರುಪಯೋಗದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಅಧಿಕಾರ ಇಲ್ಲಿ ದುರ್ಬಳಕೆ ಆಗಿದೆ. ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಕೋರಿದ್ದೇವೆ ಎಂದರು.
ಆತುರಾತುರವಾಗಿ ಈಗಿನ ಉಪ್ಪಾರ ಸಂಘದವರು ಸಮುದಾಯವ ಭವನ ಉದ್ಘಾಟಿಸಲು ಹೊರಟಿದ್ದಾರೆ. ಇದಕ್ಕೆ ಸಮಾಜದವರ ಬೆಂಬಲವಿಲ್ಲ. ಮತ್ತು ಸಮುದಾಯ ಭವನದಲ್ಲಿ ಶೌಚಾಲಯವಿಲ್ಲ, ಭೋಜನಾಲಯವೂ ಇಲ್ಲ. ಹೀಗೆ ಅಪೂರ್ಣಗೊಂಡ ಸಮುದಾಯ ಭವನವನ್ನು ಉದ್ಘಾಟಿಸುವ ಅಗತ್ಯವಿರಲಿಲ್ಲ. ಈ ಉದ್ಘಾಟನಾ ಸಮಾರಂಭಕ್ಕೆ ಸ್ವಾಮೀಜಿಗಳು ಸೇರಿದಂತೆ ಯಾರೂ ಬರುವುದೂ ಇಲ್ಲ ಎಂದರು.
ಸಂಘದ ಸದಸ್ಯರು ಸೇರಿದಂತೆ ಸಮುದಾಯದ ಗಣ್ಯರಿಗೆ ಆಹ್ವಾನ ಪತ್ರ ನೀಡಿಲ್ಲ. ಹೀಗಾಗಿ ಸಮುದಾಯ ಭವನದ ಉದ್ಘಾಟನೆ ನಡೆಯಬಾರದು ಮತ್ತು ಸಂಘದಲ್ಲಿ ಇದುವರೆಗೂ ಆಗಿರುವ ಅವ್ಯವಹಾರಗಳ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಯು.ಕೆ. ವೆಂಕಟೇಶ್, ಯು.ಕೆ. ರಮೇಶ್, ಎಸ್.ಪಿ. ಸುಧಾಕರ್, ಪ್ರಕಾಶ್ ಉಡುಗಣಿ, ಕೃಷ್ಣಪ್ಪ, ಲೋಕೇಶ್, ಗಾಜನೂರು ಗಣೇಶ್, ಚಂದ್ರಪ್ಪ ಸೇರಿದಂತೆ ಹಲವರಿದ್ದರು.
previous post