ಅದೊಂದು ಬಣ್ಣದ ಲೋಕ…ಅಲ್ಲಿ ವರ್ಣ- ವರ್ಗದ ಭೇದ ಭಾವ ಇರಲಿಲ್ಲ…ಜಾತಿ-ಮತದ ಹಂಗಿರಲಿಲ್ಲ…ಎತ್ತ ಕಣ್ಣಾಯಿಸಿದರೂ ಚೆಲುವಿನ ಚಿತ್ತಾರ…..
ಹೂದೋಟದಲ್ಲಿ ಬಣ್ಣದ ಚಿಟ್ಟೆಗಳ ಕಲರವದಂತೆ ಕಂಡ ಈ ದೃಶ್ಯ ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಕ್ಯಾಂಪಸ್ಸಿನದು. ಮಂಗಳವಾರ ಕಾಲೇಜಿನಲ್ಲಿ ¸ ಸಾಧಕರಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕøತಿಕ ದಿನ ಆಚರಣೆ ಆಯೋಜಿಸಲಾಗಿತ್ತು. ಪರಸ್ಪರ ಮುಖವನ್ನೇ ನೋಡದ ಕೋವಿಡ್ ಕಾಲದಲ್ಲಿ ಕಾಲೇಜಿನಲ್ಲಿ ನಡೆದ ಎತ್ನಿಕ್ ಡೇ ಕಾರ್ಯಕ್ರಮ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ರೀತಿಯ ಸುಗ್ಗಿ ಸಂಭ್ರಮವನ್ನೇ ನೀಡಿತು.
ಈ ಸಂಭ್ರಮ ಬರೀ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರದೆ ಅಧ್ಯಾಪಕರು ಮತ್ತು ಅಧ್ಯಾಪಕೇತರ ಸಿಬ್ಬಂದಿ ಕೂಡ ಮಕ್ಕಳೊಂದಿಗೆ ಮಕ್ಕಳಾಗಿ ಭಾರತೀಯ ಸಂಸ್ಕøತಿ ಬಿಂಬಿಸುವ ಉಡುಗೆ ತೊಟ್ಟು ಬೀಗಿದರು. ಆಯಾ ಧರ್ಮದ ವಿದ್ಯಾರ್ಥಿಗಳು ತಮ್ಮ ಸಂಪ್ರದಾಯಕ್ಕೆ ತಕ್ಕಂತ ಉಡುಗೆ ತೊಟ್ಟರೆ, ಕರ್ನಾಟಕದ ಪ್ರಾದೇಶಿಕ ವಿಭಿನ್ನತೆ ಬಿಂಬಿಸುವ ಉಡುಗೆಗಳನ್ನು ತೊಟ್ಟ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಡಗರ ಹಂಚಿಕೊಂಡರು. ಕೋವಿಡ್ ನಿಯಮ ಸ್ವಲ್ಪ ದೂರವೇ ಇಟ್ಟಿದ್ದ ಹುಡುಗ-ಹುಡುಗಿಯರು ಕಾಲೇಜು ಮೈದಾನದಲ್ಲಿಯೇ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿ ಸಾಂಪ್ರದಾಯಿಕ ದಿನವನ್ನು ಸಾರ್ಥಕಗೊಳಿಸಿದರು.
ಹುಡುಗರು ಪಂಚೆ , ಕುರ್ತಾ, ಅಂಗಿ, ಹೆಗಲ ಮೇಲೆ ಶಲ್ಯ ಹಾಕಿಕೊಂಡು ಹಮ್ಮು ಬಿಮ್ಮು ತೋರಿದರೆ, ಹುಡುಗಿಯರು ಕಾಲೇಜು ಕ್ಯಾಂಪಸ್ಸಿನಲ್ಲಿ ಬಣ್ಣದ ಚಿಟ್ಟೆಗಳ ಸಮ್ಮೇಳನ ನಡೆದಿದೆಯೇನೊ ಎಂಬಷ್ಟರ ಮಟ್ಟಿಗೆ ಅಲ್ಲೊಂದು ಚೆಲುವಿನ ಚಿತ್ತಾರ ಬಿಡಿಸಿ ಬಿನ್ನಾಣ ಮೆರೆದರು. ತಮಗಿಷ್ಟದ ತರಾವರಿ ಸೀರೆ, ಡ್ರೆಸ್‍ಗಳನ್ನು ಪೈಪೋಟಿ ಮೇಲೆ ಅಲಂಕರಿಸಿಕೊಂಡು ಮಿಂಚಿದರು. ಭಾರತೀಯ ಸಂಸ್ಕøತಿ ಬಿಂಭಿಸುವ ಈ ಸಾಂಪ್ರದಾಯಕ ದಿನದ ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯರು ಮಕ್ಕಳ ಕಲರವ ಕಂಡು ಖುಷಿ ಪಟ್ಟರು.
ಗೋಲ್ಡನ್ ಲೈಫ್:
ಮುಖ್ಯ ಅತಿಥಿಯಾಗಿ ಬಂದಿದ್ದ ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಿ.ಎಸ್. ಅರುಣ್, ಕಾಲೇಜಿನ ದಿನಗಳು ಗೋಲ್ಡನ್ ಲೈಫ್ ಆಗಿದ್ದು, ವಿದ್ಯಾರ್ಥಿಯ ಬದುಕಿನ ಅತ್ಯುತ್ತಮ ಕ್ಷಣಗಳು. ಎ.ಟಿ.ಎನ್.ಸಿ. ಕಾಲೇಜಿನಲ್ಲಿ ಅತ್ಯುತ್ತಮ ಅಧ್ಯಾಪಕರಿದ್ದಾರೆ. ಶೈಕ್ಷಣಿಕ ಪವರ್ ಅಲ್ಲಿ ಇರುವುದರಿಂದ ಪವರ್ ಫುಲ್ ವಿದ್ಯಾರ್ಥಿಗಳು ಹೊರಹೊಮ್ಮುತ್ತಿದ್ದಾರೆ. ಜೀವನದಲ್ಲಿ ಎಷ್ಟೇ ಸಾಧನೆ ಮಾಡಿ ಉನ್ನತ ಸ್ಥಾನಕ್ಕೇರಿದರೂ, ತನ್ನ ವಿದ್ಯಾರ್ಥಿ ಜೀವನವನ್ನು ಮರೆಯಬಾರದು. ಗುರು ಹಿರಿಯರನ್ನು ಕೂಡ ಮರೆಯಬಾರದು ಎಂದರು.
ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣದಲ್ಲಿ ಬಹುಪಾಲು ಹುಡುಗಿಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಹುಡುಗರ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಇವತ್ತಿನ ದಿನದ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಈಗಿನ ಮಕ್ಕಳಿಗೆ ಅನೇಕ ಜವಾಬ್ದಾರಿಗಳಿವೆ. ಅದೇ ರೀತಿ, ಅನೇಕ ಅವಕಾಶಗಳಿವೆ. ನಿಮ್ಮ ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಿ ದೇಶದ ಪ್ರಧಾನಿ ಕೂಡ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ನೀಡಿದ್ದು, ನಮ್ಮ ದೇಶದ ಪ್ರತಿಭಾನ್ವಿತರು ಬೇರೆ ದೇಶಕ್ಕೆ ಹೋಗುವುದನ್ನು ತಡೆಯಲು ಅವರ ಸೇವೆ ನಮ್ಮ ದೇಶಕ್ಕೇ ಸಿಗುವಂತಾಗಲು ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್.ಎಂ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಎನ್‍ಇಎಸ್ ಉಪಾಧ್ಯಕ್ಷರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಕೇಶವಮೂರ್ತಿ, ಪ್ರೊ. ಆರ್. ಜಗದೀಶ್, ಪ್ರೊ. ಸದಾಶಿವಪ್ಪ, ಪ್ರೊ. ಕೆ.ಎಂ. ನಾಗರಾಜ್, ಪ್ರೊ. ಹನುಮಂತಪ್ಪ, ಪ್ರೊ. ಖಾಜೀಂ ಷರೀಫ್ ಮೊದಲಾದವರಿದ್ದರು.