ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಅಪರಾಧಗಳು ಹೆಚ್ಚಾಗುತ್ತಿದ್ದು, ಜನ ಭಯಭೀತರಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮಲೆನಾಡಿನ ಸಾಂಸ್ಕೃತಿಕ ಕೇಂದ್ರವೇ ಆಗಿದ್ದು, ಇಂತಹ ಊರಿನಲ್ಲಿ ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಕೊಲೆ, ದರೋಡೆ, ಹಲ್ಲೆ, ಗಾಂಜಾ ಸೇವನೆ, ಸರಗಳ್ಳತನ ಮುಂತಾದವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ಗೋಪಾಲಗೌಡ ಬಡಾವಣೆಯಲ್ಲಿ ಬೆಳ್ಳಂಬೆಲಗ್ಗೆಯೇ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಸರ ದೋಚಿದ್ದಾರೆ. ರವೀಂದ್ರನಗರ, ವಿದ್ಯಾನಗರ ಮುಂತಾದ ಕಡೆಗಳಲ್ಲೂ ಸರ ಅಪಹರಣ ಪ್ರಕರಣಗಳು, ಮೊಬೈಲ್ ಕಳ್ಳತನಗಳು ನಡೆಯುತ್ತಿವೆ. ಮನೆ ಮುಂದೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೆ ಕಸಿದುಕೊಂಡು ಹೋಗುತ್ತಿದ್ದಾರೆ ಎಂದರು.
ಇಷ್ಟೇ ಅಲ್ಲ, ಗಾಂಜಾದ ಹಾವಳಿ ಹೆಚ್ಚಾಗುತ್ತಿದೆ. ಪೊಲೀಸರು ಗಾಂಜಾ ತಡೆಯುವಲ್ಲಿ ವಿಫಲರಾಗಿದ್ದಾರೆ. ರಾತ್ರೋರಾತ್ರಿ ಮನೆಗಳ ಬಾಗಿಲು ಬಡಿಯುವುದು, ಕಳ್ಳತನ ಮಾಡುವುದು ಮಾಮೂಲಿಯಾಗಿದೆ. ಜೊತೆಗೆ ಹೊಡೆದಾಟಗಳು ನಡೆಯುತ್ತಿದ್ದು, ಟಿಪ್ಪುನಗರ ಸೇರಿದಂತೆ ಹಲವು ಕಡೆ ಕೊಲೆ ಪ್ರಕರಣ ಕೂಡ ವರದಿಯಾಗಿವೆ ಎಂದು ದೂರಿದರು.
ಶಿವಮೊಗ್ಗದ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಕಂಡಿದೆ. ಉಸ್ತುವಾರಿ ಸಚಿವರು ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಅವರಿಗೆ ಶಿವಮೊಗ್ಗದಲ್ಲಿ ಅಪರಾಧ ವಟುವಟಿಕೆಗಳು ಹೆಚ್ಚುತ್ತಿವೆ ಎಂಬುದೇ ಗೊತ್ತಿಲ್ಲ. ಜಿಲ್ಲೆಯವರೇ ಆದ ಆರಗ ಜ್ಞಾನೇಂದ್ರ ಅವರು ಈಗ ಗೃಹ ಸಚಿವರಾಗಿದ್ದಾರೆ. ಅವರೊಡನೆ ಮಾತನಾಡಿ, ಆದಷ್ಟು ಬೇಗ ಶಿವಮೊಗ್ಗದಲ್ಲಿ ಅಪರಾಧಗಳನ್ನು ನಿಯಂತ್ರಿಸಬೇಕು. ಜನರು ನೆಮ್ಮದಿಯಿಂದ ಜೀವನ ಮಾಡುವಂತೆ ವಾತಾವರಣವನ್ನು ನಿರ್ಮಿಸಬೇಕು. ಮತ್ತು ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೊಮ್ಮನಕಟ್ಟೆ ಮಂಜುನಾಥ್, ಜಿ.ಡಿ. ಮಂಜುನಾಥ್, ಶಾಮಸುಂದರ್, ಜಿತೇಂದ್ರ, ರಂಗನಾಥ್, ದೀಪಕ್ ಸಿಂಗ್ ಇದ್ದರು.
ಶಿವಮೊಗ್ಗದ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಕಂಡಿದೆ. ಉಸ್ತುವಾರಿ ಸಚಿವರು ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಅವರಿಗೆ ಶಿವಮೊಗ್ಗದಲ್ಲಿ ಅಪರಾಧ ವಟುವಟಿಕೆಗಳು ಹೆಚ್ಚುತ್ತಿವೆ ಎಂಬುದೇ ಗೊತ್ತಿಲ್ಲ – ಕೆ.ಬಿ. ಪ್ರಸನ್ನಕುಮಾರ್