ಒಕ್ಕೂಟ ಸರ್ಕಾರ ವಿವಾದಿತ ಕೃಷಿ ಕಾನೂನುಗಳನ್ನು ಜಾರಿಗೊಳಿಸಿ ಒಂದು ವರ್ಷವಾಗುತ್ತಿರುವ ಹಿನ್ನಲೆಯಲ್ಲಿ ಸಂಯುಕ್ತ ಮೋರ್ಚಾ ಸೆಪ್ಟಂಬರ್ ೨೭ಕ್ಕೆ ಭಾರತ್ ಬಂದ್‌ಗೆ ಕರೆ ನೀಡಿದೆ.ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್‌ಬಂದ್‌ಗೆ ಕರೆ ನೀಡಿದೆ.
ಕಳೆದ ೧೦ ತಿಂಗಳಿಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ದೆಹಲಿಯಲ್ಲಿ ನಮ್ಮ ರೈತರು ಪ್ರತಿಭಟನೆ ಮಾಡುತ್ತಿದ್ದರು ಕೂಡ ಸರ್ಕಾರ ಮೌನವಹಿಸಿದೆ. ಇದೊಂದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ. ಇಡೀ ಪ್ರಪಂಚದಲ್ಲಿ ಇಂತಹ ಪ್ರತಿಭಟನೆಗೆ ಸರ್ಕಾರಗಳು ಉತ್ತರ ಹೇಳದಿರುವುದು ಅತ್ಯಂತ ಅವಮಾನಕರವಾಗಿದೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಕೇಂದ್ರ ಸರ್ಕಾರ ರೈಲ್ವೇ, ಅಂಚೆ, ವಿಮಾನ ಸೇರಿದಂತೆ ಎಲ್ಲ ಕ್ಷೇತ್ರಗಳನ್ನೂ ಖಾಸಗೀಕರಣಕ್ಕೆ ಒಪ್ಪಿಸುತ್ತಿದೆ. ಈಗ ಕೃಷಿ ಕ್ಷೇತ್ರವೂ ಕೂಡ ಖಾಸಗೀಕರಣವಾಗುತ್ತಿದ್ದು, ರೈತರು ಅನಾಥರಾಗುವ ಕಾಲ ದೂರವಿಲ್ಲ. ಬೀಜ, ಗೊಬ್ಬರ, ತಂತ್ರಜ್ಞಾನ ಸೇರಿದಂತೆ ಎಲ್ಲವೂ ಕೂಡ ಖಾಸಗೀಕರಣವಾಗುತ್ತದೆ. ಕೃಷಿ ಪಾರಂಪರಿಕವಾದದ್ದು, ಇಂತಹ ಕೃಷಿಯನ್ನು ಈಗ ಖಾಸಗಿ ಕಂಪನಿಗಳ ಕೈಗೆ ಕೊಟ್ಟು ಅವರ ಬದುಕನ್ನು ಸರ್ಕಾರ ಕಸಿದುಕೊಳ್ಳುತ್ತಿದೆ. ರೈತ ಕೃಷಿ ಶಕ್ತಿಯನ್ನೇ ಕಳೆದುಕೊಳ್ಳುವ ಕಾಲ ದೂರವಿಲ್ಲ. ಇದೊಂದು ರೈತ ಸಂಸ್ಕೃತಿಯ ನಾಶ ಎಂದರು.
ಕೆ.ಟಿ. ಗಂಗಾಧರ್ ಮಾತನಾಡಿ, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಚಳವಳಿ ಐತಿಹಾಸಿಕವಾದದ್ದು, ಇದೊಂದು ಅಹಿಂಸೆಯ ಚಳವಳಿ. ಹಗಲು ರಾತ್ರಿ ಚಳವಳಿ ನಡೆಸುತ್ತಿದ್ದಾರೆ. ಇಂತಹ ಚಳವಳಿಯನ್ನು ನಮ್ಮ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಾಯೋಜಿತ ಎಂದು ಕರೆಯುತ್ತಿರುವುದು ಅತ್ಯಂತ ದುರದೃಷ್ಟಕರ. ಹಾಗೆ ರೈತರನ್ನು ಜರಿಯುವ ಕೆಲಸಕ್ಕೆ ಬೊಮ್ಮಾಯಿಯವರಂತಹ ಭಾಷಾಪಂಡಿತರು ಮಾತನಾಡುತ್ತಿರುವುದು ಅತ್ಯಂತ ಹೇಯಕರ. ಚಳವಳಿಯನ್ನೇ ಮರೆತ ನಾಯಕರಿವರು ಎಂದು ದೂರಿದರು.
ಬಂದ್‌ನ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಎಂ.ಶ್ರೀಕಾಂತ್ ಸೆ.೨೭ರಂದು ಶಿವಮೊಗ್ಗ ಬಂದ್ ಅತ್ಯಂತ ಯಶಸ್ವಿಯಾಗಲಿದೆ. ಆಟೋ ಚಾಲಕರು, ಲಾರಿ ಮಾಲೀಕರು, ವ್ಯಾಪಾರಸ್ಥರು, ಉದ್ಯಮಿಗಳು, ಅಂಗಡಿ ಮಾಲೀಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಕೆಎಲ್ ಆಶೋಕ್ ಮಾತನಾಡಿ,ಒಕ್ಕೂಟ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸುವುದರ ಜೊತೆಗೆ ವಿದ್ಯುತ್ ಮಸೂದೆ ರದ್ದು ಮಾಡುವಂತೆ, ಇಂಧನಗಳ ಬೆಲೆ ಇಳಿಸುವಂತೆ, ಭೂ ಸ್ವಾಧೀನ ಕಾಯ್ದೆ ಮತ್ತು ನೂತನ ಶಿಕ್ಷಣ ನೀತಿಗಳ ರದ್ದತಿಗೂ ಆಗ್ರಹಿಸಲಾಗುವುದು. ಒಟ್ಟಾರೆ, ಶಿವಮೊಗ್ಗ ಬಂದ್ ಅತ್ಯಂತ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಮುಖರಾದ ಕೆ.ಪಿ. ಶ್ರೀಪಾಲ್, ಕೆ.ಎಲ್. ಅಶೋಕ್, ಎನ್. ರಮೇಶ್, ಎಸ್. ಶಿವಮೂರ್ತಿ, ಝೀಫಾನ್, ಆಫ್ತಾಪ್ ಪರ್ವೀಜ್, ಟಿ.ಹೆಚ್. ಹಾಲೇಶಪ್ಪ, ಶಾಂತವೀರನಾಯ್ಕ ಸೇರಿದಂತೆ ಹಲವರಿದ್ದರು.
ಭಾರತೀಯ ಸಂಯುಕ್ತ ಕಿಸಾನ್ ಹೋರಾಟ ಸಮಿತಿ ಸೆ.೨೭ರಂದು ಕರೆ ನೀಡಿರುವ ಭಾರತ್ ಬಂದ್‌ಗೆ ನಗರದ ಎಲ್ಲ ಪ್ರಗತಿಪರ, ರೈತಪರ ಸಂಘಗಳು, ವಿವಿಧ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.ಸೆ.೨೭ರಂದು ನಗರದ ವಿವಿಧ ಸ್ಥಳಗಳಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಹೊಳೆ ಬಸ್‌ಸ್ಟಾಪ್, ಹೊಳೆಹೊನ್ನೂರು ರಸ್ತೆ, ಹೊನ್ನಾಳಿ ರಸ್ತೆ, ಜೈಲ್ ರಸ್ತೆ, ಸಾಗರ ರಸ್ತೆ, ಸವಳಂಗ ರಸ್ತೆಯಿಂದ ಪ್ರತಿಭಟನೆಯ ಮೂಲಕ ಹೋರಾಟಗಾರರು ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ಸಮಾವೇಶಗೊಂಡು ಅಲ್ಲಿಂದ ಬೃಹತ್ ಮೆರವಣಿಗೆಯ ಮೂಲಕ ಮಹಾವೀರ ವೃತ್ತದಲ್ಲಿ ಭಾರೀ ಬಹಿರಂಗ ಸಭೆ ನಡೆಸಲಾಗುವುದು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು.
ಕೆ.ಟಿ ಗಂಗಾಧರ್,ರೈತ ಮುಖಂಡ