ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ನಡುವೆ ದ್ವೇಷ, ಪ್ರಚೋದನೆ ಬಿತ್ತಲು ಹೊರಟಿರುವ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ, ರಾಜ್ಯ ಸಚಿವ ಗೋವಿಂದ ಕಾರಜೋಳ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಭೋವಿ, ಬಂಜಾರ, ಛಲವಾದಿ, ಕೊರಚ, ಕೊರಮ, ಅಲೆಮಾರಿ, ಅರೆ ಅಲೆಮಾರಿ, ಸುಡುಗಾಡು ಸಿದ್ದ ಇನ್ನಿತರೆ ಸಮುದಾಯಗಳಿಗೆ ಕಂಟಕವಾಗಿರುವ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು. ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಸೋರಿಕೆಯಾಗಿರುವ ವರದಿಯ ಅಂಶಗಳನ್ನು ಗಮನಿಸಿದಾಗ ಇದಕ್ಕೆ ಪಾವಿತ್ರ್ಯತೆ ಇಲ್ಲವೆನಿಸುತ್ತದೆ. ಆಯೋಗ ತನ್ನ ಉದ್ದೇಶಕ್ಕೆ ವಿರುದ್ಧದ ಶಿಫಾರಸ್ಸು ಮಾಡಿದೆ. ಅಸಂವಿಧಾನಿಕ ಅಂಶಗಳು, ಅವಾಸ್ತವಿಕ ಅಂಕಿ, ಅಂಶಗಳು ವರದಿಯಲ್ಲಿವೆ. ಇದು ಈಗ ಅಪ್ರಸ್ತುತವಾಗಿದ್ದು, ಸ್ವೀಕಾರಕ್ಕೆ ಯೋಗ್ಯವಲ್ಲ ಎಂದರು.
ಹೋರಾಟಗಳ ಹೆಸರಿನಲ್ಲಿ ಬಂಜಾರ ಕುಲಗುರು ಸಂತ ಸೇವಾಲಾಲ್, ಸಚಿವ ಪ್ರಭು ಚೌಹಾಣ್ ಅವರನ್ನು ಅವಹೇಳನ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಂಬೇಡ್ಕರ್ ಪ್ರಯತ್ನ ಸಂವಿಧಾನಿಕ ನಿಯಮಗಳಡಿ ಪರಿಶಿಷ್ಟರಿಗೆ ಮೀಸಲಾತಿ ಸೌಲಭ್ಯ ದೊರೆಯುತ್ತಿದೆ. ಆದರೆ, ಸಂಘ ಪರಿವಾರದ ಕೆಲವರು ರಾಜಕೀಯ ಪಕ್ಷಗಳ ಕೆಲವು ಮುಖಂಡರು ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸಹೋದರ ಸಮುದಾಯಗಳಲ್ಲಿ ದ್ವೇಷ ಬಿತ್ತಿ, ಒಡೆದು ಆಳುವ ಕುತಂತ್ರ ನಿಲ್ಲಿಸಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಬಂಜಾರ ಕುಲಗುರು ಸರ್ದಾರ್ ಸೇವಾಲಾಲ್ ಸ್ವಾಮೀಜಿ ವಹಿಸಿದ್ದರು. ಒಕ್ಕೂಟದ ಪ್ರಮುಖರಾದ ವೀರಭದ್ರಪ್ಪ ಪೂಜಾರ್, ನಾನ್ಯಾನಾಯ್ಕ, ಧೀರರಾಜ್ ಹೊನ್ನವಿಲೆ, ಆರ್. ಜಗದೀಶ್, ಶಾಂತವೀರ ನಾಯ್ಕ, ರವಿಕುಮಾರ್ ಮೊದಲಾದವರಿದ್ದರು.