ನಾಡಿಗೆ ಬೆಳಕು ಕೊಡಲು ಬದುಕು ಕೊಟ್ಟವರು ಇಂದಿಗೂ ಕತ್ತಲಲ್ಲಿದ್ದಾರೆ.ಮುಳುಗಡೆ ಸಂತ್ರಸ್ಥರಿಗೆ ಇನ್ನು ಸಹ ಹಕ್ಕುಪತ್ರ ನೀಡದ ಈ ಸರ್ಕಾರ ಭ್ರಷ್ಟ ಸರ್ಕಾರ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಗುಡುಗಿದರು.
ಶರಾವತಿ ವರಾಹಿ, ಚಕ್ರಾ, ಸಾವೇಹಕ್ಲುಮುಳುಗಡೆ ಸಂತ್ರಸ್ತರ ಮತ್ತು ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ನೇತೃತ್ವದಲ್ಲಿ ಶರಾವತಿ-ಚಕ್ರಾ,ಸಾವೆ ಹಕ್ಲು ಮುಳುಗಡೆ ಸಂತ್ರಸ್ಥರ ಭೂ ಹಕ್ಕಿಗಾಗಿ ಕಲ್ಲುಕೊಪ್ಪದಿಂದ-ತೀರ್ಥಹಳ್ಳಿಯವರೆಗೆ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನೆ ಕಳೆದುಕೊಂಡು ಶರಾವತಿ ಮುಳುಗಡೆ ಸಂತ್ರಸ್ಥರು ಅತಂತ್ರರಾಗಿದ್ದಾರೆ.ನಮ್ಮನಾಳುವ ಸರ್ಕಾರಗಳಿಗೆ ಇಚ್ಛಾಶಕ್ತಿ ಮಾಯವಾಗಿದೆ.ರೈತರನ್ನು ಕಡೆಗಣಿಸುತ್ತಿದ್ದಾರೆ.ಸಮಾಜವಾದಿ ಹೋರಾಟಗಾರ ಗೋಪಾಲಗೌಡರ ಹುಟ್ಟೂರಿನ ನಾವುಗಳಿಂದು ಹಕ್ಕು ಪತ್ರವನ್ಮು ಭಿಕ್ಷೆಯ ರೀತಿಯಲ್ಲಿ ಕೇಳುವ ಸ್ಥಿತಿಗೆ ಬಂದಿರುವುದು ವ್ಯವಸ್ಥೆಯ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ನ್ಯಾಯ ಸಿಗುವ ತನಕ ಹೋರಾಟ ನಿಲ್ಲುವುದಿಲ್ಲ.ಜಲಾಶಯಕ್ಕಾಗಿ ಸರ್ವಸ್ವನ್ನು ಕಳೆದುಕೊಂಡ ರೈತರಿಗೆ ಹಕ್ಕು ಪತ್ರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ.ಪ್ರತಿಯೊಬ್ಬ ಸಂತ್ರಸ್ಥ ರೈತರು ಮತ್ತೆ ಅರ್ಜಿ ಹಾಕಿ ನ್ಯಾಯ ಕೇಳೊಣ ಎಂದರು.
ಮಾಜಿ ಶಾಸಕ ಮಧುಬಂಗಾರಪ್ಪ ಮಾತನಾಡಿ,ರೈತರನ್ನು ಕಡೆಗಣಿಸುತ್ತಿರುವ ಸರ್ಕಾರಗಳಿಗೆ ಜನ ತಕ್ಕ ಪಾಠ ಕಲಿಸುವ ಕಾಲ ಬಂದಿದೆ.ತೊಂಬತ್ತರ ಹರೆಯದ ಕಾಗೋಡು ಸಾಹೇಬ್ರು ರೈತರಿಗಾಗಿ ನ್ಯಾಯ ಕೇಳಲು ಬೀದಿಗೆ ಬಂದಿದ್ದಾರೆ.ಮಲೆನಾಡಿನ ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.
ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕೇಂದ್ರದ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ರೈತರಿಗೆ ಸುಳ್ಳು ಹೇಳುತ್ತ ಬಂದಿದೆ.ಮೋದಿ ಎಂಬ ಪ್ರಧಾನಿ ಮಹಾನ್ ಸುಳ್ಳುಗಾರ.ರೈತ ವಿರೋಧಿ ಬಿಜೆಪಿ ಸರ್ಕಾರವನ್ನು ಮುಂದಿನ ದಿನಗಳಲ್ಲಿ ಮತದಾರರೆ ಓಡಿಸುತ್ತಾರೆ ಎಂದರು.
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಮಾತನಾಡಿ, ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ.ಇದು ರೈತ ವಿರೋಧಿ ಸರ್ಕಾರ ವಾಗಿದೆ.ಈ ಸರ್ಕಾರದ ಮಂತ್ರಿಗಳಿಗೆ ಜವಾಬ್ದಾರಿ ಅನ್ನುವುದಿಲ್ಲ.ಗೃಹಮಂತ್ರಿ ಆರಗ ಜ್ಞಾನೇಂದ್ರ ಕಾಂಗ್ರೆಸ್ ನವರೇ ನನ್ನ ರೇಪ್ ಮಾಡುತ್ತಿದ್ದಾರೆ ಅನ್ನುತ್ತಾರೆ,ಸಾರಿಗೆ ಸಚಿವ ರಾಮುಲು ಎಂಬ ಪೆಕರ ಅಸಂಬಂಧ ಮಾತಾಡುತ್ತಾರೆ ಇಂತವರ ಸರ್ಕಾರವನ್ನು ನಾವು ನೋಡುತ್ತಿರುವುದು ದುರಂತ ಎಂದರು.
ಚಳುವಳಿಯ ನೇತೃತ್ವ ವಹಿಸಿದ್ದ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ನ್ಯಾಯಯುತ ಪರಿಹಾರಕ್ಕಾಗಿ ರೈತರು ಕಳೆದ ಅರವತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಇಂದಿನ ಸರ್ಕಾರ ರೈತರನ್ನು ನಿರ್ಲಕ್ಷ್ಯಮಾಡುತ್ತಿದೆ.ರೈತರ ಮೇಲೆ ದಬ್ಬಾಳಿಕೆ ಮಾಡುವ ಸರ್ಕಾರವನ್ನು ನಾವು ಸಹಿಸುವುದಿಲ್ಲ.ನಮ್ಮ ಬೇಡಿಕೆಗಳನ್ನು ಬೇಷರತ್ತಾಗಿ ಸರ್ಕಾರ ಈಡೇರಿಸಬೇಕು ಎಂದರು.
ಶರಾವತಿ ಚಳುವಳಿಯ ಪಾದಯಾತ್ರೆಯ ಸಮಾರೋಪ ಸಮಾರಂಭದ ನಂತರ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಸುಂದರೇಶ್,ಜಿಲ್ಲಾ ಮುಖಂಡ ಸಾಗರದ ತೀ.ನಾ.ಶ್ರೀನಿವಾಸ್, ಡಿ.ಕೆ.ಶಿ.ಅಭಿಮಾನಿ ಸಂಘದ ಜಿಲ್ಲಾ ಅಧ್ಯಕ್ಷ ಮೋಹನ್, ಹಿರಿಯ ರೈತ ಗೋಪಾಲ ನಾಯಕ್ ಮುಖಂಡರಾದ ಡಾ.ಸುಂದರೇಶ್,ಬಾ.ಪ್ರಭಾಕರ್,ಹಾ.ಪಧ್ಮನಾಭ್,ರಾಘವೇಂದ್ರ ಶೆಟ್ಟಿ,ಡಿ.ಎಸ್.ವಿಶ್ವನಾಥ ಶೆಟ್ಟಿ,ಅಶ್ವಲ್ ಗೌಡ,ನಾಗರಾಜ ಪೂಜಾರಿ ,ಸುಷ್ಮ ಸಂಜಯ್,ಭಾರತಿ ಪ್ರಭಾಕರ್,ಶೃತಿ ವೆಂಕಟೇಶ್, ಪ.ಪಂ.ಸದಸ್ಯರಾದ ಅಜಾದಿ,ರತ್ನಾಕರ್ ಶೆಟ್ಟಿ,ಗೀತಾ ರಮೇಶ್,ಮಂಜುಳ ನಾಗೇಂದ್ರ,ಸುಶೀಲಾ ಶೆಟ್ಟಿ ಮುಂತಾದವರಿದ್ದರು.