ಶಿವಮೊಗ್ಗ ಮಹಾನಗರ ಪಾಲಿಕೆ, ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಗಾಂಧಿ ಜಯಂತಿ ಮತ್ತು ತುಂಗಾನಗರದ ೧೦೦ ಅಡಿ ರಸ್ತೆಗೆ ಗಾಂಧಿ ಬಸಪ್ಪ ರಸ್ತೆ, ತುಂಗಾ ಚಾನಲ್ ವೃತ್ತಕ್ಕೆ ಗಾಂಧಿ ಬಸಪ್ಪ ವೃತ್ತ ಎಂದು ನಾಮಕರಣದ ಉದ್ಘಾಟನಾ ಸಮಾರಂಭ ನಡೆಯಿತು.
ಈ ಮೂರು ಕಾರ್ಯಕ್ರಮಗಳನ್ನು ಉದ್ಘಾಟಿಸಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಗಾಂಧಿ ಬಸಪ್ಪ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಜೈಲು ಶಿಕ್ಷೆ ಅನುಭವಿಸಿದ್ದರು. ರಾಷ್ಟ್ರಭಕ್ತರಾಗಿದ್ದರು. ಅವರ ಹೆಸರನ್ನು ರಸ್ತೆಗೆ ಮತ್ತು ವೃತ್ತಕ್ಕೆ ಇಟ್ಟಿರುವುದು ಅತ್ಯಮತ ಹೆಮ್ಮೆಯ ವಿಚಾರವಾಗಿದೆ. ಅವರ ಆದರ್ಶಗಳನ್ನು ಅವರ ಕುಟುಂಬದವರು ಮುಂದುವರೆಸಿಕೊಂಡು ಹೋಗಬೇಕು ಎಂದರು.
ಗಾಂಧಿ ಹೆಸರು ಇತ್ತೀಚೆಗೆ ದುರುಪಯೋಗವಾಗುತ್ತಿರುವುದು ಬೇಸರದ ವಿಷಯವಾಗಿದೆ. ಗಾಂಧಿ ಸ್ವಾತಂತ್ರ್ಯಕ್ಕಾಗಿ ಹೋರಾಡುವುದರ ಜೊತೆಗೆ ರಾಷ್ಟ್ರ ಭಕ್ತಿಯನ್ನು ಕೂಡ ಮೆರೆದಿದ್ದಾರೆ. ಭಾರತೀಯ ಸಂಸ್ಕೃತಿಯ ಪ್ರತೀಕ ಅವರಾಗಿದ್ದರು. ಆದರೆ, ಅವರ ಹೆಸರು ಇತ್ತೀಚಿನ ದಿನಗಳಲ್ಲಿ ಬೇರೆ ರೀತಿಯ ಚರ್ಚೆಯಾಗುತ್ತಿರುವುದು ಮಾತ್ರ ಬೇಸರದ ವಿಷಯ ಎಂದರು.
ಸ್ವಾತಂತ್ರ್ಯ ಬಂದು ೭೫ ವರ್ಷಗಳಾದರೂ ನಾವು ಇನ್ನು ಇಲ್ಲಗಳ ನಡುವೆಯೇ ಬದುಕುತ್ತಿದ್ದೇವೆ. ಈ ದೇಶದಲ್ಲಿ ೫ ಕೋಟಿ ಜನರಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕ ಇದೆ ಎಂದರೆ ಊಹಿಸಿಕೊಳ್ಳಬಹುದು. ಮೋದಿ ಪ್ರಧಾನಿಯಾದ ಮೇಲೆ ಈಗ ೧೨ ಕೋಟಿ ನಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದು ಹೆಚ್ಚಲ್ಲದಿದ್ದರೂ ಕೂಡ ಕೇವಲ ಕೆಲವೇ ವರ್ಷಗಳಲ್ಲಿ ಮೂಲ ಸೌಲಭ್ಯಕ್ಕೆ ಮೋದಿ ಸರ್ಕಾರ ಒತ್ತು ನೀಡಿದೆ. ಗುಲಾಮಗಿರಿಯಿಂದ ಬಿಡಿಸಿಕೊಳ್ಳುವ ಎಲ್ಲ ಕೆಲಸಗಳು ನಡೆಯುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿ ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ಡಿ.ಎಸ್. ಅರುಣ್, ಎಸ್.ಎಸ್. ಜ್ಯೋತಿಪ್ರಕಾಶ್, ದತ್ತಾತ್ರಿ, ಶಿವಕುಮಾರ್ ಎಸ್., ಸುವರ್ಣಾ ಶಂಕರ್, ಆರತಿ ಆ.ಮ. ಪ್ರಕಾಶ್, ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದ ಎಸ್.ಬಿ. ವಾಸುದೇವ್, ಎಸ್.ಬಿ. ಅಶೋಕ್ ಕುಮಾರ್ ಹಾಗೂ ಅವರ ಕುಟುಂಬವರ್ಗದವರು ಉಪಸ್ಥಿತರಿದ್ದರು. ಆಯುಕ್ತ ಚಿದಾನಂದ ವಠಾರೆ ಸ್ವಾಗತಿಸಿದರು.