ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದಿರುವ ರೈತರ ಮೇಲಿನ ದಾಳಿ ಮತ್ತು ಮಾರಣಹೋಮ ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ತೆನಿ ಅವರ ಬೆಂಗಾವಲು ವಾಹನ ರೈತರ ಮೇಲೆ ಹರಿದಿದೆ. ಇದು ಕ್ರೂರವಾದ ಹತ್ಯೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಈ ರೀತಿಯ ಘೋರವಾದ ಕೃತ್ಯ ಹಿಂದೆಂದೂ ನಡೆದಿರಲಿಲ್ಲ. ಈ ಹೀನಕೃತ್ಯಕ್ಕೆ ಕಾರಣರಾದ ಸಚಿವರ ಮೇಲೆ ಮತ್ತು ಅವರ ಬೆಂಗಾವಲು ಪಡೆಯ ಮೇಲೆ ಉತ್ತರ ಪ್ರದೇಶ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಚಿವ ಅಜಯ್ ಮಿಶ್ರಾ ತೆನಿ ಅವರು ಇತ್ತೀಚೆಗೆ ರೈತರ ಪ್ರತಿಭಟನೆ ಕುರಿತು ಕಟುವಾಗಿ ಹೇಳಿಕೆ ನೀಡಿದ್ದಲ್ಲದೇ ಪ್ರತಿಭಟಿಸುವವರ ಮೇಲೆ ಉಗ್ರ ಕ್ರಮಕೈಗೊಳ್ಳುವ ಬಹಿರಂಗ ಬೆದರಿಕೆ ಹಾಕಿದ್ದರು. ಈ ಹಿನ್ನಲೆಯಲ್ಲಿ ಅವರ ತವರು ಕ್ಷೇತ್ರವಾದ ಲಖೀಂಪುರ್ ಖೇರಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ರೈತರು ಸಚಿವ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ರಾಸ್ತಾರೋಖೋ ನಡೆಸುತ್ತಿದ್ದ ರೈತರ ಮೇಲೆ ಬೆಂಗಾವಲು ಪಡೆ ವಾಹನ ಹರಿಸುವ ಮೂಲಕ ಬೆದರಿಕೆಯನ್ನು ಸಚಿವರು ಸತ್ಯಗೊಳಿಸಿದ್ದಾರೆ. ಈ ಕೃತ್ಯ ಭಾರತದ ಜನರಿಗೆ ಸಂವಿಧಾನ ಕೊಡಮಾಡಿರುವ ಪ್ರತಿಭಟನೆಯ ಹಕ್ಕಿನ ತೀವ್ರ ಉಲ್ಲಂಘನೆ ಆಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಘಟನೆಯ ನಂತರವೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಥವಾ ಯಾವುದೇ ಉನ್ನತಾಧಿಕಾರಿಗಳು ಜವಾಬ್ದಾರಿಯುವ ವರ್ತನೆ ತೋರಿಲ್ಲ. ಗಾಯಗೊಂಡ ರೈತರನ್ನು ಅಥವಾ ಅವರ ಕುಟುಂಬದವರನ್ನು ಸಂಪರ್ಕಿಸಲಿಲ್ಲ. ಘಟನೆಗೆ ಕಾರಣರಾದವರ ಮೇಲೆ ಕ್ರಮ ಜರುಗಿಸುವ ಕನಿಷ್ಠ ಭರವಸೆ ನೀಡಿಲ್ಲ. ಇದು ಹಾಡಹಗಲೇ ನಡೆದ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ದೂರಿದರು.
ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಿ ಘಟನೆಗೆ ಕಾರಣರಾದವರ ಮೇಲೆ ತೀವ್ರ ಕ್ರಮಕೈಗೊಳ್ಳಬೇಕು ಮತ್ತು ಸಚಿವರ ಮೇಲೆಯೂ ಕೂಡ ಕಾನೂನುಕ್ರಮ ಕೈಗೊಳ್ಳಬೇಕು. ಕರ್ನಾಟಕ ಸರ್ಕಾರವೂ ಕೂಡ ಘಟನೆಯನ್ನು ಖಂಡಿಸಿ ಉತ್ತರ ಪ್ರದೇಶ ಸರ್ಕಾರಕ್ಕೆ ಖಂಡನಾ ಪತ್ರ ಕಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಎಂ. ಶ್ರೀಕಾಂತ್, ಕೆ.ಪಿ. ಶ್ರೀಪಾಲ್, ಹೆಚ್.ಆರ್. ಬಸವರಾಜಪ್ಪ, ಕೆ.ಟಿ. ಗಂಗಾಧರ್, ಕೆ.ಎಲ್. ಅಶೋಕ್, ಟಿ.ಹೆಚ್. ಹಾಲೇಶಪ್ಪ, ಎಂ. ಗುರುಮೂರ್ತಿ, ಡಿ.ಎಸ್. ಶಿವಕುಮಾರ್, ವಾಟಾಳ್ ಮಂಜುನಾಥ್ ಇತರರು ಇದ್ದರು.
previous post