Malenadu Mitra
ರಾಜ್ಯ ಶಿವಮೊಗ್ಗ

ಕಲಿಸಿದ ಗುರುಗಳಿಗೆ ಗೌರವ ಸಮರ್ಪಣೆ, ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲೊಂದು ಭಾವುಕ ಕಾರ್ಯಕ್ರಮ

ಅಲ್ಲಿ ಹಳೆಯ ಮತ್ತು ಮಧುರ ನೆನಪುಗಳಿದ್ದವು, ಕಾಲೇಜಿನಲ್ಲಿ ಕೂಡಿ ಕಲಿತ ಗೆಳೆಯರು, ಕಲಿಸಿದ ಗುರುಗಳು ಎಲ್ಲವೂ ಒಂದು ರೀತಿಯ ಭಾವುಕ ಸನ್ನಿವೇಶ…. ಇದು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಕಣ್ಣಿಗೆ ಕಟ್ಟಿದ ದೃಶ್ಯ . ಸಹ್ಯಾದ್ರಿ ವಿಜ್ಞಾನ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮಾಗಮ ಮತ್ತು ಗುರುವಂದನ ಕಾರ್ಯಕ್ರಮದಲ್ಲಿ ನೆರೆದ ಎಲ್ಲರೂ ಕಾಲೇಜು ದಿನಗಳನ್ನು ಮೆಲುಕು ಹಾಕಿದರು. ಎಷ್ಟೊ ವರ್ಷಗಳ ಬಳಿಕ ಕಂಡ ಗೆಳೆಯ ,ಗೆಳತಿಯರನ್ನು ಕಂಡು ಭಾವುಕರಾಗಿ ಪರಸ್ಪರರು ಮಾತಿನ ಮಂಟಪ ಕಟ್ಟಿಕೊಂಡರೆ, ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು, ಈಗ ನಿವೃತ್ತರಾಗಿ ವಿಶ್ರಾಂತ ಜೀವನ ಕಳೆಯುತ್ತಿರುವ ಹಿರಿಯ ಜೀವಗಳು ತಮ್ಮ ಒಡನಾಡಿಗಳನ್ನು ಒಂದೆಡೆ ಕಂಡು ಚಕಿತರಾದರು. ಕೆಲವರು ತಾವೂ ಮಕ್ಕಳಿಗೆ ಪಾಠ ಹೇಳುತ್ತಿದ್ದ ಕೊಠಡಿ, ಕುಳಿತು ಕೊಳ್ಳುತ್ತಿದ್ದ ಸ್ಟಾಫ್ ರೂಂಗಳನ್ನೂ ನೋಡಿ ಗತಿಸಿದ ನೆನಪುಗಳನ್ನು ಮನದಲ್ಲಿ ಮರುಸೃಷ್ಟಿಸಿಕೊಂಡರು. ಕಾಲೇಜು ಕ್ಯಾಂಪಸ್‌ನಲ್ಲಾದ ಬದಲಾವಣೆಗಳನ್ನು ನೋಡಿ ಖುಷಿಪಟ್ಟರು.
ಹಿರಿಯ ವಿದ್ಯಾರ್ಥಿಗಳು ಇದ್ದ ಅಲ್ಪ ಸಮಯದಲ್ಲಿಯೇ ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರರನ್ನು ಸಂಪರ್ಕಿಸಿಕೊಂಡು ತಾವು ಓದಿದ ಕಾಲೇಜಿಗೆ ಬಂದು ಸಂಭ್ರಮಿಸಿದರು. ಮಕ್ಕಳು, ಕುಟುಂಬ, ಸಹಪಾಠಿಗಳು, ಕೊರೊನ, ಉದ್ಯೋಗ ಇತ್ಯಾದಿ ವಿಚಾರಗಳನ್ನು ವಿನಿಮಯ ಮಾಡಿಕೊಂಡು ಹಳೆ ವಿದ್ಯಾರ್ಥಿಗಳ ಸಮಾಗಮದ ದಿನವನ್ನು ಸ್ಮರಣೀಯಗೊಳಿಸಿಕೊಂಡರು.


ದತ್ತು ತೆಗೆದುಕೊಳ್ಳಲು ಸಲಹೆ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ್ಕ, ಮಾಜಿ ಸಭಾಪತಿ ಡಿ. ಎಚ್. ಶಂಕರಮೂರ್ತಿ ಅವರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಬಡ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗುವ ಕೆಲಸ ಮಾಡಬೇಕು. ನಿವೃತ್ತ ಪ್ರಾಧ್ಯಾಪಕರು ಮತ್ತು ಪ್ರಾಚಾರ್‍ಯರನ್ನು ಗೌರವಿಸುತ್ತಿರುವುದು ಒಂದು ಸೌಭಾಗ್ಯ. ಇಂದು ವಿದ್ಯಾಭ್ಯಾಸದ ಪರಿಕಲ್ಪನೆ ಬದಲಾಗಿದೆ. ನಮ್ಮ ಮಕ್ಕಳ ಚಿಂತನೆ ಮತ್ತು ಸಂಶೋಧನೆಗೆ ವಿಶ್ವವೇ ವೇದಿಕೆಯಾಗಿದೆ. . ಉನ್ನತ ವ್ಯಾಸಂಗಕ್ಕೆ ಅವಕಾಶದ ಹೆಬ್ಬಾಗಿಲು ತೆರೆದಿದೆ. ಸಂಶೋಧನೆಗೆ ಅತ್ಯುತ್ತಮ ವಾತಾವರಣ ಇದೆ. ಆದರೆ ಬಡ ಮತ್ತು ಪ್ರತಿಭಾವಂತರ ಮಕ್ಕಳಿಗೆ ಇದು ಕೈಗೆಟುಕುತ್ತಿಲ್ಲ. ತಾವು ಕಲಿಯುವ ವೇಳೆ ಈ ರೀತಿ ಅವಕಾಶವಿರಲಿಲ್ಲ. ಆದುದರಿಂದ ಸಂಘದ ಸದಸ್ಯರು ಈ ರೀತಿ ಯೋಜನೆಗೆ ಭಾಗೀದಾರರಬೇಕೆಂದು ಸಲಹೆ ನೀಡಿದರು. ಕಾಲೇಜನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕು. ಇವತ್ತಿನ ಅವಶ್ಯಕತೆಗೆ ಸ್ಪಂದಿಸಬೇಕಿದೆ. ಕಾಲೇಜು ಎಲ್ಲಾ ರೀತಿಯಲ್ಲೂ ಆಧುನಿಕವಾಗಿರಲು ಬೇಕಾದ ಸೌಲಭ್ಯ ಕಲ್ಪಿಸಿಕೊಡುವತ್ತ ಚಿಂತಿಸಬೇಕೆಂದು ಕರೆ ನೀಡಿದರು.

ಗ್ರಾಮಾಂತರ ಶಾಸಕ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ ಅಶೋಕ್ ನಾಯ್ಕ್ ಮಾತನಾಡಿ, ಶಿಕ್ಷಕರು ವಾಸ್ತುಶಿಲ್ಪಿಗಳು. ಕಲ್ಲನ್ನು ಕಡೆದು ಮೂರ್ತಿಯನ್ನಾಗಿ ಮಾಡುವವರು. ಅವರು ತಮ್ಮನ್ನೆಲ್ಲ ಉತ್ತಮ ಸಂಸ್ಕಾರವಂತರನ್ನಾಗಿ ಮಾಡಿದ್ದಾರೆ. ಇಂದು ಇಲ್ಲಿ ಕಲಿತ ಸಹಸ್ರಾರು ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ನಾನು ನನ್ನಿಬ್ಬರು ಮಕ್ಕಳನ್ನು ಇದೇ ಕಾಲೇಜಿನಲ್ಲಿ ಓದಿಸಿದ್ದೇನೆ. ಕಾಲೇಜಿಗೂ ಸಹ ಎಲ್ಲೆಡೆ ಹೆಸರು ಇದೆ. ಈ ಸಂದರ್ಭದಲ್ಲಿ ಕಾಲೇಜಿನ ಹೆಚ್ಚುವರಿ ಕಟ್ಟಡವನ್ನು ನಿರ್ಮಿಸಲು ಎಲ್ಲಾ ರೀತಿಯಿಯಲ್ಲೂ ನೆರವು ನೀಡಲು ಬದ್ಧ ಎಂದು ಹೇಳಿದರು.
ಇನ್ನೊಬ್ಬ ಅತಿಥಿ, ಮಾಜಿ ಎಂಎಲ್ಸಿ ಸಿದ್ದರಾಮಣ್ಣ ಮಾತನಾಡಿ, ಸಾರ್ವಜನಿಕ ಸಹಭಾಗಿತ್ವ ಇದ್ದಾಗ ಏನೆಲ್ಲ ಕೆಲಸವನ್ನು ಮಾಡಬಹುದು, ಹಿರಿಯ ವಿದ್ಯಾರ್ಥಿಗಳ ಸಂಘ ಬಲಿಷ್ಠವಾಗಿದೆ. ಅದರ ಸದಸ್ಯರು ಕಾಲೇಜಿಗೆ ಬೇಕಾದ ಎಲ್ಲಾ ಸೌಕರ್‍ಯ ಅಥವಾ ಕುಂದುಕೊರತೆ ಬಗೆಹರಿಸಲು ಕೆಲಸ ಮಾಡಬೇಕು. ಆಧುನಿಕ ಕಾಲಕ್ಕೆ ತಕ್ಕಂತೆ ಕಾಲೇಜನ್ನು ಸಜ್ಜುಗೊಳಿಸಬೇಕಿದೆ. ಇಲ್ಲಿ ಕಲಿತ ಎಲ್ಲರ ಸಂಪರ್ಕ ಸಾಧಿಸಲು ಹಳೆಯ ವಿದ್ಯಾರ್ಥಿಗಳ ಸಂಘ ವೇದಿಕೆಯಾಗಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು ಮತ್ತು ಪ್ರಾಚಾರ್ಯರು ಈ ಕಾಲೇಜು ಹಾಗೂ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸಲಹೆ ನೀಡಬೇಕು. ನಿಮ್ಮ ಜ್ಞಾನವನ್ನು ಬಳಕೆ ಮಾಡಿಕೊಳ್ಳುವ ದಿಸೆಯಲ್ಲಿ ವಿವಿ ಚಿಂತನೆ ಮಾಡಲಿದೆ. ಕುವೆಂಪು ಅವರ ವಿಶ್ವಮಾನವ ತತ್ವದಂತೆ ಇಂದು ನಮ್ಮ ವಿಶ್ವವಿದ್ಯಾಲಯ ಶೈಕ್ಷಣಿಕವಾಗಿ ಸಾಧನೆಯ ಹಾದಿಯಲ್ಲಿದೆ ಎಂದು ಹೇಳಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

ಕುಲಸಚಿವೆ ಜಿ. ಅನುರಾಧ, ಮಾಜಿ ಪ್ರಾಚಾರ್‍ಯ ಪ್ರೊ. ಹೂವಯ್ಯ ಗೌಡ, ಹಿರಿಯ ವಿದ್ಯಾರ್ಥಿ ಉಮೇಶ್ ಶಾಸ್ತ್ರಿ ಹಾಜರಿದ್ದರು. ಈ ಸಂದರ್ಭದಲ್ಲಿ ಇದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಚಾರ್‍ಯರು ಮತ್ತು ಪ್ರಾಧ್ಯಾಪಕರನ್ನು ಗೌರವಿಸಲಾಯಿತು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್‍ಯೆ ಪ್ರೊ.. ವಾಗ್ದೇವಿ ಪ್ರಾಸ್ತಾವಿಕ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ಅದು ಕಾರ್ಯವ್ಯಾಪ್ತಿ ಮತ್ತು ಉದ್ದೇಶಗಳನ್ನು ವಿವರಿಸಿದರು. ಕಲಾ ಕಾಲೇಜು ಪ್ರಾಚಾರ್‍ಯ ಪ್ರೊ. ಕೆ. ಬಿ. ಧನಂಜಯ, ವಾಣಿಜ್ಯ ಕಾಲೇಜಿನ ಪ್ರಾಚಾರ್‍ಯೆ ಪ್ರೊ. ಎಂ. ಕೆ. ವೀಣಾ ಹಾಜರಿದ್ದರು. ಪ್ರೊ. ಎಂ. ಎನ್. ವಿದ್ಯಾಶಂಕರ್, ಪವಿತ್ರ ಪ್ರೊ. ರಾಜೇಶ್ವರಿ ನಿರೂಪಿಸಿದರು. ಹಿರಿಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ನಾಗರಾಜ್ ಪರಿಸರ ವಂದಿಸಿದರು.

ಶಿಕ್ಷಕರು ವಾಸ್ತುಶಿಲ್ಪಿಗಳು. ಕಲ್ಲನ್ನು ಕಡೆದು ಮೂರ್ತಿಯನ್ನಾಗಿ ಮಾಡುವವರು. ಅವರು ತಮ್ಮನ್ನೆಲ್ಲ ಉತ್ತಮ ಸಂಸ್ಕಾರವಂತರನ್ನಾಗಿ ಮಾಡಿದ್ದಾರೆ.ಕಾಲೇಜಿನ ಹೆಚ್ಚುವರಿ ಕಟ್ಟಡವನ್ನು ನಿರ್ಮಿಸಲು ಎಲ್ಲಾ ರೀತಿಯಿಯಲ್ಲೂ ನೆರವು ನೀಡಲು ಬದ್ಧ -ಅಶೋಕ್ ನಾಯ್ಕ್ ,ಶಾಸಕ

ವಿಶ್ರಾಂತ ಪ್ರಾಧ್ಯಾಪಕರ ಜ್ಞಾನವನ್ನು ಕಾಲೇಜುಗಳು ಬಳಸಿಕೊಳ್ಳಬೇಕು. ಕುವೆಂಪು ವಿವಿಯು ಈ ದಿಸೆಯಲ್ಲಿ ಚಿಂತನೆ ಮಾಡಲಿದೆ. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ಮಾದರಿ ಕೆಲಸ ಮಾಡಲಿ
ಪ್ರೊ.ಬಿ.ಪಿ ವೀರಭದ್ರಪ್ಪ, ಕುಲಸಚಿವ, ಕುವೆಂಪು ವಿವಿ

Ad Widget

Related posts

ಅನುಕಂಪದ ಅಲೆಯಲ್ಲಿ ಕಿಮ್ಮನೆ, ಅಧಿಕಾರದ ಪ್ರಭಾವಳಿಯಲ್ಲಿ ಆರಗ, ಬುದ್ದಿವಂತರ ಮತಕ್ಷೇತ್ರದಲ್ಲಿ ಕುತೂಹಲ ಘಟ್ಟದಲ್ಲಿ ರಣಕಣ

Malenadu Mirror Desk

ಮತ್ತೆ ಏರಿದ ಕೊರೊನ, ಯಾವ ತಾಲೂಕಲ್ಲಿ ಎಷ್ಟು ಗೊತ್ತಾ ?

Malenadu Mirror Desk

ರಾಜರತ್ನನಿಗೆ ಶಿವಮೊಗ್ಗ ಜನರ ಭಾವುಕ ನಮನ, ಸದ್ಭಾವನ ಟ್ರಸ್ಟ್ ನಿಂದ ಯಶಸ್ವೀ ಅಪ್ಪು-ಅಮರ ಕಾರ್ಯಕ್ರಮ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.