ರಾಜ್ಯದಲ್ಲಿ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಮತ್ತು ಸಮುದಾಯ ಆಡಳಿತ ಮಂಡಳಿ ಇರುವ ಶ್ರೀಕ್ಷೇತ್ರ ಸಿಗಂದೂರಿನ ಆಡಳಿತದಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದು ಎಂಬ ವಿಷಯಗಳನ್ನು ಮುಖ್ಯಮಂತ್ರಿ ಜತೆ ಮಾತನಾಡುವುದಾಗಿ ಕೇಂದ್ರ ಸಚಿವರು ಹಾಗೂ ಈಡಿಗ ಸಮಾಜದ ಪ್ರಮುಖರಾದ ಶ್ರೀಪಾದ್ ನಾಯಕ್ ಹೇಳಿದರು.
ಹಾವೇರಿಯಲ್ಲಿ ಭಾನುವಾರ ನಡೆದ ಆರ್ಯ ಈಡಿಗ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ಕಡೆಯಿಂದ ಈ ವಿಷಯದಲ್ಲಿ ಆಗಬೇಕಾದ ಪ್ರಯತ್ನವನ್ನು ಮಾಡುವೆ. ಸಮಾಜದ ಹಿಂದುಳಿದವರನ್ನು ಶೈಕ್ಷಣಿಕವಾಗಿ ಮುಂದೆ ತರುವ ಕೆಲಸವನ್ನು ಈಡಿಗ ಮಠ ಮತ್ತು ಸಂಘಗಳು ಮಾಡಬೇಕು ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವರಾದ ಮನೋಹರ ತಹಸಿಲ್ದಾರ್, ರುದ್ರಪ್ಪ ಲಮಾಣಿ, ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ಎಸ್.ರಾಮಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಸತೀಶ್ ಈಳಿಗೆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈಡಿಗ ಸಮಾಜದ ಗುರುಗಳಾದ ಶ್ರೀ ಅರುಣಾನಂದ ಸ್ವಾಮೀಜಿ, ಶ್ರೀ ಸತ್ಯನಂದ ತೀರ್ಥ ಸ್ವಾಮೀಜಿ, ಶ್ರೀ ಶಂಕರಗೌಡ ತಾತ ಸ್ವಾಮೀಜಿ ಆಶೀರ್ವಚನ ನೀಡಿದರು.
ಉಪವಾಸ ಸತ್ಯಾಗ್ರಹ
ಸಮಾವೇಶದ ಸಾನಿದ್ಯ ವಹಿಸಿದ್ದ ಡಾ.ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಸರಕಾರ ಅ.೩೦ ರೊಳಗೆ ಈಡಿಗ ನಿಗಮ ಸ್ಥಾಪಿಸಿದ್ದರೆ, ನವೆಂಬರ್ ಮೊದಲವಾರದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪ್ರಕಟಿಸಿದರು. ಸಮಾಜಕ್ಕೆ ಆಗುವ ಶೋಷಣೆ ಸಹಿಸಲು ಸಾಧ್ಯವಿಲ್ಲ. ಸಿಗಂದೂರು ದೇವಸ್ಥಾನದ ವಿಚಾರದಲ್ಲಿ ಇಡೀ ಈಡಿಗ ಸಮುದಾಯ ಧರ್ಮದರ್ಶಿಗಳ ಬೆನ್ನಿಗೆ ನಿಲ್ಲಲಿದೆ. ಅದೇ ನಿಗಮ ರಚನೆಯಲ್ಲಿ ಸರಕಾರದ ವಿಳಂಬ ಧೋರಣೆಯನ್ನೂ ಸಹಿಸುವುದಿಲ್ಲ ಎಂದು ಸ್ವಾಮೀಜಿ ಹೇಳಿದರು.