ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ನಿಮಿತ್ತ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಹಾಭಿಷೇಕ, ಮಹಾಪೂಜೆ ಮತ್ತು ಚಂಡಿಕಾಹೋಮವನ್ನು ಆಯೋಜಿಸಲಾಗಿತ್ತು. ಸಂಜೆ ದೀಪಾಲಂಕಾರದಲ್ಲಿ ಸ್ಥಳೀಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಾತ್ರಿ ಸಿಗಂದೂರು ಚೌಡೇಶ್ವರಿ ಯಕ್ಷಗಾನ ಮಂಡಳಿಯಿಂದ “ರಾಮಾಶ್ವಮೇಧ ’ ಎಂಬ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ನಡೆಯಿತು.
ಬೆಳಗ್ಗ ಶ್ರೀಕ್ಷೇತ್ರಕ್ಕೆ ಸೋಲೂರು ಈಡಿಗ ಮಹಾಸಂಸ್ಥಾನ ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹಾಗೂ ಸಾರಗನಜಡ್ಡು ಕಾರ್ತಿಕೇಯ ಕ್ಷೇತ್ರದ ಶ್ರೀ ಯೋಗೇಂದ್ರ ಗುರುಗಳು ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಉಭಯ ಗುರುಗಳನ್ನು ಧರ್ಮದರ್ಶಿ ಡಾ.ರಾಮಪ್ಪ , ಪ್ರಧಾನಕಾರ್ಯದರ್ಶಿ ರವಿಕುಮಾರ್ ಅವರು ಬರಮಾಡಿಕೊಂಡರು. ಈ ಸಂದರ್ಭ ವಾದ್ಯಮೇಳ ಹಾಗೂ ಪೂರ್ಣಕುಂಭ ಮೆರವಣಿಗೆಯೊಂದಿಗೆ ದೇಗುಲಕ್ಕೆ ಸ್ವಾಮೀಜಿಗಳನ್ನು ಬರಮಾಡಿಕೊಳ್ಳಲಾಯಿತು. ಭಕ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರೊಂದಿಗೆ ದೇವಸ್ಥಾನದಲಿ ಸಮಾಲೋಚನೆ ನಡೆಸಿದ ಸ್ವಾಮೀಜಿಗಳು ನಿತ್ಯ ನಡೆಯುವ ಪೂಜೆ, ಧಾರ್ಮಿಕ ಹಾಗೂ ಸೇವಾಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಸ್ಥಾನದವತಿಯಿಂದ ಸಾಗರ ತಾಲೂಕು ಹಾಗೂ ಕರೂರು ಹೋಬಳಿಯಲ್ಲಿ ದೇವಸ್ಥಾನ ನಡೆಸುತ್ತಿರು ಸಮಾಜ ಸೇವಾ ಕಾರ್ಯಗಳು ಹಾಗೂ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಕೈಗೊಂಡಿರುವ ಕೆಲಸಗಳ ಬಗ್ಗೆ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭ ದೇವಾಲಯದ ವ್ಯವಸ್ಥಾಪಕ ಪ್ರಕಾಶ್ ಭಂಡಾರಿ ಸ್ಥಳೀಯ ಮುಖಂಡರುಗಳು, ಭಕ್ತಾದಿಗಳು ಹಾಜರಿದ್ದರು.