Malenadu Mitra
ರಾಜ್ಯ ಶಿವಮೊಗ್ಗ

ಜನಮನ ಸೆಳೆದ ಶಿವಮೊಗ್ಗ ದಸರಾ, ಕೊರೊನ ಆತಂಕದ ನಡುವೆಯೂ ಜನಸ್ಪಂದನ

ಕೊರೊನ ಆತಂಕದಿಂದಿ ಕಳೆದ ವರ್ಷ ಕಳೆಗುಂದಿದ ಶಿವಮೊಗ್ಗ ದಸರಾ ಈ ಬಾರಿ ಅಸ್ತಿರತೆಯ ನಡುವೆಯೂ ಅದ್ದೂರಿಯಾಗಿಯೇ ನಡೆದು ಬನ್ನಿಮುಡಿಯುವುದರೊಂದಿಗೆ ಶುಕ್ರವಾರ ಸಂಪನ್ನಗೊಂಡಿತು. ಒಂಬತ್ತು ದಿನಗಳ ಕಾಲ ಯುವ,ಮಕ್ಕಳ, ರಂಗ, ಕೃಷಿ, ಸಾಂಸ್ಕೃತಿಕ, ಕ್ರೀಡೆ ಹೀಗೆ ಹಲವು ಸಮಿತಿಗಳ ಉಸ್ತುವಾರಿಯಲ್ಲಿ ನಡೆದ ದಸರಾ ಸಂಭ್ರಮ ಹತ್ತುದಿನಗಳ ನಿರ್ವಿಘ್ನವಾಗಿ ನೆರವೇರಿತು. ಶುಕ್ರವಾರ ನಂದಿಕೋಲಿಗೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭವಾದ ದಸರಾ ರಾಜಬೀದಿ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಫ್ರೀಡಂ ಪಾರ್ಕ್‌ನಲ್ಲಿ ಬನ್ನಿಕಡಿದು, ದುಷ್ಟ ಶಕ್ತಿಯ ಸಂಕೇತವಾದ ರಾವಣ ಸಂಹಾರದ ಮೂಲಕ ಸಮಾಪ್ತಿಗೊಂಡಿತು. ಇದಾದ ಬಳಿಕ ಪಟಾಕಿ ಸಿಡಿಸುವ ಸಂಭ್ರಮ ನೆರೆದವರಿಗೆ ಚಿತ್ತಾಕರ್ಷಕವಾಗಿತ್ತು. ಸಿಡಿಮದ್ದುಗಳು ಆಗಸದಲ್ಲಿ ಮೂಡಿಸಿದ ಚಿತ್ತಾರಗಳಿಗೆ ರಾತ್ರಿ ಸುರಿದ ಭಾರೀ ಮಳೆ ಅಡ್ಡಿಯಾಯಿತು. ನಗರದ ಗ್ರಾಮದೇವತೆಗಳ ಮೆರವಣಿಗೆಯನ್ನು ನಗರದ ಜನ ಕಣ್ತುಂಬಿಕೊಂಡರು.


ಮೆರವಣಿಗೆಯಲ್ಲಿ ಅಷ್ಟೊಂದು ಜನರಿರಲಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಹಲವೆಡೆ ವೀಕ್ಷಿಸಿದರು. ಮೆರವಣಿಗೆಯೂ ಅಷ್ಟೇನು ವೈಭವಯುತವಾಗಿರಲಿಲ್ಲ. ಜಾನಪದ ನೃತ್ಯ, ವಾದ್ಯ, ವಿವಿಧ ವೇಷಧಾರಿಗಳ ಕುಣಿತದ ಮಧ್ಯೆ ಚಾಮುಂಡೇಶ್ವರಿಯ ವಿಗ್ರಹವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು..
ಮಧ್ಯಾಹ್ನ ೩ ಗಂಟೆಯ ವೇಳೆಗೆ ಕೋಟೆ ರಸ್ತೆಯ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ನಂದಿಕೋಲಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವುದರ ಮೂಲಕ ಮೆರವಣಿಗೆಗೆ ಚಾಲನೆಕೊಡಲಾಯಿತು. ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಮತ್ತು ಮೇಯರ್ ಸುನೀತಾ ಅಣ್ಣಪ್ಪ ನಂದಿಕೋಲಿಗೆ ಪೂಜೆ ಸಲ್ಲಿಸಿದರು. ಪಾಲಿಕೆಯ ಅಧಿಕಾರಿಗಳು ಮತ್ತು ಸದಸ್ಯರು ಇದರಲ್ಲಿ ಪಾಲ್ಗೊಂಡಿದ್ದರು.
ನಾಡದೇವಿ ಚಾಮುಂಡೇಶ್ವರಿಯನ್ನು ಈ ಬಾರಿ ಆನೆಯ ಮೇಲೆ ಮೆರವಣಿಗೆಯಲ್ಲಿ ತರಲಾಗುತ್ತದೆ ಎಂದು ನಂಬಲಾಗಿತ್ತಾದರೂ ಇದಕ್ಕೆ ಸರಕಾರದ ಅನುಮತಿ ಸಿಗದ ಕಾರಣ ಅದು ಸಾಧ್ಯವಾಗಲಿಲ್ಲ. ನಗರಸಭೆಯ ಲಾರಿಯಲ್ಲಿ ದೇವಿಯ ವಿಗ್ರಹವನ್ನು ಎತ್ತರದಲ್ಲಿ ಕುಳ್ಳಿರಿಸಿ ಅಲಂಕರಿಸಿ ಮೆರವಣಿಗೆ ನಡೆಸಲಾಯಿತು.
ಸಕ್ರೇಬೈಲಿನಿಂದ ಬಂದ ಆನೆಗಳಾದ ಸಾಗರ್ ಮತ್ತು ಭಾನುಮತಿಯನ್ನು ಮದುಮಕ್ಕಳಂತೆ ಶೃಂಗರಿಸಿ ಮನಸೂರೆಗೊಳ್ಳುವಂತೆ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಇವೆರಡೂ ಎಲ್ಲರ ಗಮನ ಸೆಳೆದವು.


ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯ ಕಳೆಯನ್ನು ಹೆಚ್ಚಿಸಿದವು. ರಾಜ್ಯದ ವಿವಿಧೆಡೆಯಿಂದ ಬಂದ ಹತ್ತಾರು ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. ಮಹಿಳೆಯರ ಚಂಡೆ, ಮಹಿಳಾ ಡೊಳ್ಳಿನ ತಂಡ ವಿಶೇಷ ಗಮನ ಸೆಳೆದವು. ಚಂಡೆಯ ಸದ್ದಿಗೆ ತಕ್ಕಂತೆ ಮೆರಣಿಗೆಯಲ್ಲಿ ಮುಖಂಡರು ನರ್ತಿಸಿದರು. ದಾರಿಯುದ್ದಕ್ಕೂ ನೃತ್ಯ ಸಾಗಿತ್ತು.
ಕೋಟೆಯಿಂದ ಆರಂಭವಾದ ಮೆರವಣಿಗೆಯು ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಜೈಲು ರಸ್ತೆ, ಲಕ್ಷ್ಮೀ ಟಾಕೀಸ್ ಮೂಲಕ ಫ್ರೀಡಂ ಪಾರ್ಕಿಗೆ ಸಂಜೆ ೬ರ ವೇಳೆ ತಲುಪಿತ್ತು. ಅಲ್ಲಿ ತಹಸೀಲ್ದಾರ್ ನಾಗರಾಜ್ ಅವರು ಅಂಬುಚ್ಚೇದ ಮಾಡಿದ ಬಳಿಕ ಸಾರ್ವಜನಿಕರು ಬನ್ನಿ ವಿನಿಮಯ ಮಾಡಿಕೊಂಡು ಪರಸ್ಪರ ಶುಭಾಶಯ ಕೋರಿಕೊಂಡರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಎಸ್.ದತ್ತಾತ್ರಿ, ಕೆ.ಇ.ಕಾಂತೇಶ್ ಹಾಜರಿದ್ದರು.
ಮೆರವಣಿಗೆಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ತಹಶೀಲ್ದಾರ್ ನಾಗರಾಜ, ಉಪಮೇಯರ್ ಶಂಕರ್, ಮಾಜಿ ಮೇಯರ್, ಸುವರ್ಣ ಶಂಕರ್, ಪ್ರಮುಖರಾದ ರೇಖಾಮುರುಳೀಧರ್, ಚೆನ್ನಬಸಪ್ಪ,ಜ್ಞಾನೇಶ್, ಯಮುನಾ ರಂಗೇಗೌಡ, ರಮೇಶ್ ಹೆಗ್ಡೆ, ಯೋಗೇಶ್ ಸೇರಿದಂತೆ ಪಾಲಿಕೆಯ ಎಲ್ಲಾ ಸದಸ್ಯರು ಮತ್ತು ದಸರಾ ಸಮಿತಿಯ ಮುಖಂಡರು ಹಾಜರಿದ್ದರು.

Ad Widget

Related posts

ಸರ್ಕ್ಯೂಟ್ ಹೌಸ್ ಸರ್ಕಲ್ ನಲ್ಲಿ ಭೀಕರ ಅಪಘಾತ- ಇಬ್ಬರು ಯುವಕರು ಸಾವು

Malenadu Mirror Desk

ಗಾಜನೂರು ಡ್ಯಾಮಿಗೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ

Malenadu Mirror Desk

ಎಲ್ಲಾ ವಾರ್ಡ್‌ಗಳಿಗೂ ಸ್ಯಾನಿಟೈಸರ್ : ಯುವ ಕಾಂಗ್ರೆಸ್‌ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.