Malenadu Mitra
ಮಲೆನಾಡು ಸ್ಪೆಷಲ್ ರಾಜ್ಯ ಶಿವಮೊಗ್ಗ

ಇತಿಹಾಸ ಸೃಷ್ಟಿಸಿದ ಇತಿಹಾಸಕಾರ ಖಂಡೋಬರಾವ್, ಅಧ್ಯಯನಕಾರರಿಗೆ ವಿವಿಯಾಗಿರುವ ಪ್ರೇಮಸೌಧ

ಇತಿಹಾಸ ಶಿಕ್ಷಕರಾಗಿ ಬರೀ ಪಾಠ ಮಾಡದೆ ಇತಿಹಾಸವನ್ನೇ ಸೃಷ್ಟಿ ಮಾಡಿರುವ ’ಅಮೂಲ್ಯಶೋಧ’ದ ಕತೆಯಿದು. ಶಿವಮೊಗ್ಗದಿಂದ ೧೦ ಕಿ.ಮೀ.ದೂರದಲ್ಲಿ ನರಸಿಂಹರಾಜಪುರ ಮಾರ್ಗದಲ್ಲಿರುವ ಅಮೂಲ್ಯಶೋಧ ವಸ್ತುಸಂಗ್ರಹಾಲಯವು ಲಕ್ಕಿನಕೊಪ್ಪ ಸರ್ಕಲ್‌ನಿಂದ ಕೆಲವೇ ಮಾರುಗಳ ದೂರದಲ್ಲಿದೆ.
ಅಮೂಲ್ಯಶೋಧದಲ್ಲಿ ಒಂದು ಪ್ರೇಮ ಕಥನ ಅಡಗಿದೆ. ಇದರ ನಿರ್ಮಾರ್ತೃ ಎಚ್.ಖಂಡೋಬರಾವ್. ತಾವು ಪ್ರೀತಿಸಿ ಮದುವೆಯಾದ ಯಶೋದಾ ಅವರಿಗೆ ಮೂತ್ರಪಿಂಡ ವೈಫಲ್ಯವಾದಾಗ ಖಂಡೋಬರಾವ್ ಸಾಕಷ್ಟು ನೊಂದರು. ಹೇಗಾದರೂ ಮಾಡಿ ಪತ್ನಿಯನ್ನು ಉಳಿಸಿಕೊಳ್ಳಬೇಕೆಂದು ಪ್ರಯತ್ನಿಸಿದರು. ಈ ದಿಸೆಯಲ್ಲಿ ತಮ್ಮ ಒಂದು ಮೂತ್ರಪಿಂಡವನ್ನೇ ಪತ್ನಿಗೆ ನೀಡಿ ಹಲವು ವರ್ಷಗಳ ಕಾಲ ಬದುಕಿಸಿಕೊಂಡರು. ಕೊನೆಗೆ ಡಯಾಲಿಸಿಸ್ ಹಂತ ತಲುಪಿದ ಯಶೋದಾ ೨೦೦೭ರಲ್ಲಿ ನಿಧನ ಹೊಂದಿದರು. ಈ ನೋವನ್ನು ತಡೆಯಲಾಗದ ಖಂಡೋಬರಾವ್‌ರವರು ಪತ್ನಿಯ ನೆನಪು ಶಾಶ್ವತವಾಗಿರಬೇಕೆಂದು ನಿರ್ಧರಿಸಿ ಒಂದು ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ಮುಂದಾಗುತ್ತಾರೆ. ಅದುವೇ ಪತ್ನಿ ಯಶೋದಾರ ನೆನಪಿನ ಶೋಧವೇ ’ಅಮೂಲ್ಯಶೋಧ’.

ಖಂಡೋಬರಾವ್ ಹುಟ್ಟಿದ್ದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗರ್ಗೇಶ್ವರಪುರ ಎಂಬಲ್ಲಿ. ಎಂಎ ಬಿಇಡಿ ಮಾಡಿದ ನಂತರ ಎನ್‌ಇಎಸ್‌ನಲ್ಲಿ ೧೯೬೮ರಿಂದ ೧೯೯೮ರವರೆಗೆ ಸೇವೆ ಸಲ್ಲಿಸಿದ್ದಾರೆ.
ಖಂಡೋಬರಾವ್ ಹೇಳುವಂತೆ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯ ಎಂದು ಹೆಸರಿಡಲು ಮುಖ್ಯವಾಗಿ ’ಅಮೂಲ್ಯಶೋಧ’ ಎಂಬ ಕೊನೆಯ ಮೂರು ಅಕ್ಷರ ’ಯಶೋದ’ ಎಂದಾಗುತ್ತದೆ. ಅದಕ್ಕೆ ಆ ಹೆಸರನ್ನು ಇಡಲಾಗಿದೆ.
ಅತ್ಯಮೂಲ್ಯವಾದ ಐತಿಹಾಸಿಕ ವಸ್ತುಗಳ ಶೋಧನೆಗೆ ತೊಡಗಿ, ಸಂಗ್ರಹಿಸಿ ಅವುಗಳನ್ನು ಕರ್ನಾಟಕವೇ ಏಕೆ ಇಡೀ ಭಾರತದಲ್ಲಿಯೇ ಶ್ರೇಷ್ಟತೆಗಳಲ್ಲಿ ಒಂದಾಗಬಹುದಾದ ಏಕವ್ಯಕ್ತಿ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದ್ದಾರೆ. ಇಂತಹ ಅಪರೂಪದ ವಸ್ತುಗಳ ಸಂಗ್ರಹ ಸೌಧ ಅರ್ಥಾತ್ ಅವರು ಕಟ್ಟಿರುವ ಪ್ರೇಮ ಸೌಧವೇ ’ಅಮೂಲ್ಯಶೋಧ’. ಈ ವಸ್ತು ಸಂಗ್ರಹಾಲಯವು ಬಹಳ ಸುಂದರ ಪರಿಸರದಲ್ಲಿದ್ದು ಅಡಿಕೆ, ತೆಂಗು, ಮರಗಳಿಂದಲೂ ಹಚ್ಚನೆಯ ಕೆಂಪು ಬಣ್ಣ ಹಾಗೂ ಮಂಗಳೂರು ಹೆಂಚಿನ ಹೊದಿಕೆಯ ಕಟ್ಟಡಗಳಿಂದಲೂ ಮೊದಲ ನೋಟಕ್ಕೆ ಬಹಳವಾಗಿ ಆಕರ್ಷಿಸುತ್ತವೆ.
ಈ ವಸ್ತು ಸಂಗ್ರಹಾಲಯದಲ್ಲಿ ಪ್ರಮುಖವಾಗಿ ಎರಡು ಕಟ್ಟಡಗಳಿವೆ. ಒಂದು ಪತ್ನಿ ಯಶೋದಾ ನೆನಪಿನ ’ನೆನಪು’ ಸಭಾಂಗಣ. ಇಲ್ಲಿಯೂ ಅತ್ಯಮೂಲ್ಯ ವಸ್ತುಗಳ ಭಂಡಾರವೇ ಇದೆ. ಇಲ್ಲಿಯ ಸಭಾಂಗಣವನ್ನು ಬಾಡಿಗೆಗೆ ಕೊಡುವ ವ್ಯವಸ್ಥೆಯಿದ್ದು ಇಲ್ಲಿ ನಡೆಯುವ ಅಂತಹ ಯಾವುದೇ ಕಾರ್ಯಕ್ರಮಗಳು ಒಂದು ಭಾವುಕ ಲೋಕವನ್ನೇ ಸೃಷ್ಟಿಸುವಷ್ಟು ಸಮರ್ಥವಾಗಿವೆ. ಇಲ್ಲಿ ದಿವಂಗತ ಯಶೋದಾ ಖಂಡೋಬರಾವ್ ಅವರ ದೊಡ್ಡದಾದ ಚಿತ್ರವು ಗಮನ ಸೆಳೆಯುತ್ತದೆ.
’ಅಮೂಲ್ಯ ಶೋಧ’ದ ಮುಖ್ಯ ವಸ್ತು ಸಂಗ್ರಹಾಲಯದಲ್ಲಿ ಮೂರು ವಿಭಾಗಗಳಿವೆ. ಅವೆಂದರೆ- ನಾಣ್ಯದರ್ಶಿನಿ, ಮಲೆನಾಡು ದರ್ಶಿನಿ ಮತ್ತು ಭಾರತ ದರ್ಶಿನಿ.


ನಾಣ್ಯದರ್ಶಿನಿ : ಇತಿಹಾಸ ಉಪನ್ಯಾಸಕರಾಗಿದ್ದ ಖಂಡೋಬರಾವ್ ಮೂಲತಃ ನಾಣ್ಯ ಸಂಗ್ರಾಹಕರು. ಇಲ್ಲಿ ಇವರು ಸಂಗ್ರಹಿಸಿದ ನಾಣ್ಯಗಳ ಬೃಹತ್ ಸಂಗ್ರಹವೇ ಇದೆ. ಈ ವಿಭಾಗದಲ್ಲಿ ನಾಣ್ಯಗಳ ಹುಟ್ಟು,ಬೆಳವಣಿಗೆ ಮತ್ತು ಅದರ ವಿಕಾಸದ ಬಗ್ಗೆ ಮೂರು ಭಾಗಗಳಿವೆ.
ಖಂಡೋಬರಾವ್ ಅವರ ಸಂಗ್ರಹದಲ್ಲಿ ಹಿಂದೆ ೧೬ಮಹಾ ಜನಪದಗಳ ಕಾಲದಲ್ಲಿ ಚಲಾವಣೆಯಲ್ಲಿ ಇದ್ದ ಮುದ್ರಾಂಕಿತ ನಾಣ್ಯಗಳನ್ನು ಕಾಣಬಹುದು. ಸೀಸ, ತಾಮ್ರ, ಬೆಳ್ಳಿ ಮತ್ತು ಚಿನ್ನದ ನಾಣ್ಯಗಳು ಇಲ್ಲಿದ್ದು ವಿವಿಧ ರಾಜವಂಶಗಳ ಕಾಲದ ನಾಣ್ಯಗಳ ಸಂಗ್ರಹವೇ ಇಲ್ಲಿದೆ. ಟಿಪ್ಪುವಿನ ಮರಣಾನಂತರ ಸಿಂಹಾಸನವನ್ನೇರಿದ ಮುಮ್ಮಡಿ ಕೃಷ್ಣರಾಜ ಒಡೆಯರ್ ೩೩ ವರ್ಷಗಳ ಕಾಲ ರಾಜ್ಯವಾಳಿದರು. ತಾವು ಆಳಿದ ಪ್ರತಿ ವರ್ಷಕ್ಕೆ ಒಂದರಂತೆ ಒಂದು ನಾಣ್ಯವನ್ನು ಕನ್ನಡದ ಅಂಕೆ ಸಂಖ್ಯೆಗಳನ್ನು ಬಳಸಿ ೧ರಿಂದ ೩೩ ತಾಮ್ರದ ನಾಣ್ಯಗಳನ್ನು ಟಂಕಿಸಿ ಚಲಾವಣೆಗೆ ತಂದರು. ಇಂತಹ ನಾಣ್ಯಗಳ ಅಪೂರ್ವ ಕಣಜ ಅಮೂಲ್ಯ ಸಂಗ್ರಹದಲ್ಲಿದೆ.


ಮಲೆನಾಡು ದರ್ಶಿನಿ : ಮಲೆನಾಡು ದರ್ಶಿನಿ ವಿಭಾಗದಲ್ಲಿ ಪ್ರಮುಖವಾಗಿ ಗಮನಸೆಳೆಯುವುದೆಂದರೆ, ಶಿವಪ್ಪ ನಾಯಕನ ಅರಮನೆ ಮಾದರಿ. ಮರದಲ್ಲಿ ನಿರ್ಮಿಸಿರುವ ಕಿರುಅರಮನೆಯ ಮಾದರಿ ಈ ವಸ್ತು ಸಂಗ್ರಹಾಲಯಕ್ಕೆ ಶೋಭೆ ತಂದಿದೆ. ಹಾಗೆಯೇ ಕಂಬಗಳು ಹಾಗೂ ಪಡಸಾಲೆ ಇರುವ ಹಳೆಯ ಕಾಲದ ಸುಂದರ ಮನೆಯ ಮಾದರಿಯಂತೂ ಮಂತ್ರಮುಗ್ಧಗೊಳಿಸುತ್ತದೆ.


ಭಾರತ ದರ್ಶಿನಿ : ಈ ವಿಭಾಗದಲ್ಲಿ ನಗಾರಿಗಳು, ಗೃಹ ಬಳಕೆ ವಸ್ತುಗಳು, ಹಳೆಯ ರೇಡಿಯೋ,ಮುದ್ರಣ ಯಂತ್ರಗಳು, ೧೫೦ ವರ್ಷಗಳ ಹಿಂದಿನ ಗ್ರಾಮ್ ಫೋನ್‌ಗಳು, ಭತ್ತ ಬೀಸುವ ಮರದ ಸಾಧನ, ಗಂಜಿ ಬಸಿಯುತ್ತಿದ್ದ ಮರದ ಮರಿಗೆಗಳು, ಕಂಚಿನ ಲೋಹದ ಉಪಕರಣಗಳು, ಪೂಜಾ ಸಾಮಗ್ರಿಗಳು, ರಾಜರ ಉಡುಪುಗಳು ಗಮನ ಸೆಳೆಯುತ್ತವೆ.
ಅಮೂಲ್ಯಶೋಧದ ಹೊರಗಿನ ಆಹ್ಲಾದಕರ ಪ್ರಶಾಂತ ವಾತಾವರಣ ಮನಸ್ಸಿಗೆ ಆನಂದವನ್ನು ತರುತ್ತದೆ. ಮುದವನ್ನು ನೀಡುತ್ತದೆ. ಇಲ್ಲಿ ಪ್ರಿವೆಡ್ಡಿಂಗ್ ಪೋಟೋ ಮತ್ತು ವಿಡಿಯೋ ಶೂಟಿಂಗಿಗೂ ಅವಕಾಶ ನೀಡಿದ್ದು ಪ್ರೇಮಿಗಳ ಕಲರವವನ್ನು ಸಹ ನೋಡಬಹುದು. ಖಂಡೋಬರಾವ್ ಲೇಖಕರೂ ಹೌದು. ಈಗಾಗಲೇ ತಮ್ಮ ಮಗರ್ ಪ್ರಕಾಶನದ ಅಡಿಯಲ್ಲಿ ನಾಣ್ಯಗಳ ಇತಿಹಾಸ, ನಾಣ್ಯ ಕರ್ನಾಟಕ,ನಾಣ್ಯ ಭಾರತ, ನೂರಾರು ಕವನಗಳು, ಶಿವಮೊಗ್ಗೆಯ ಯಶೋಗಾಥೆ ಮುಂತಾದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.

ಖಂಡೋಬರಾವ್ ಅವರು ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕೆಲಸವನ್ನು ಮಾಡಿದ್ದಾರೆ. ದೇಶದಲ್ಲಿ ಎರಡನೆಯ ವೈಯಕ್ತಿಕ ವಸ್ತು ಸಂಗ್ರಹಾಲಯ ಇದಾಗಿದೆ. ನಮ್ಮ ಸಂಸ್ಕೃತಿ ಮತ್ತ್ತು ಇತಿಹಾಸವನ್ನು ಬಿಂಬಿಸುವ ಕೆಲಸವನ್ನು ಅಲ್ಲಿ ಮಾಡಿದ್ದಾರೆ. ಇತಿಹಾಸದಲ್ಲಿ ಅತ್ಯಂತ ಪರಿಪಕ್ವತೆಯನ್ನು ಹೊಂದಿರುವ ಅವರು, ನಿಖರವಾಗಿ ಯಾವುದೇ ವಿಷಯವಾಗಿ ಮಾತನಾಡುತ್ತ್ತಾರೆ. ಇಂದಿನ ತಲೆಮಾರಿಗೆ ಇವರ ಮಾರ್ಗದರ್ಶನ, ವಿಚಾರಧಾರೆಗಳ ನೆರವು ಬೇಕಿದೆ.

  • ಟಿ. ಆರ್. ಅಶ್ವತ್ಥನಾರಾಯಣ ಶ್ರೇಷ್ಠಿ

ಅಭಿನಂದನಾ ಸಮಾರಂಭ

ಅಮೂಲ್ಯ ಶೋಧ ಎಂಬ ಅಪರೂಪದ ವಸ್ತು ಸಂಗ್ರಹಾಲಯದ ಮೂಲಕ ಜಿಲ್ಲೆಗೆ ಕೀರ್ತಿ ತಂದಿರುವ ಇತಿಹಾಸಜ್ಞ ಮತ್ತು ೮೨ರ ಹರಯದಲ್ಲೂ ಕ್ರಿಯಾಶೀಲರಾಗಿ ದುಡಿಯುತ್ತಿರುವ ಎಚ್. ಖಂಡೋಬರಾವ್ ಅವರಿಗೆ ನಗರದ ನಾಗರಿಕರಿಂದ ಅಭಿನಂದನಾ ಸಮಾರಂಭ ಮತ್ತು ಅಮೂಲ್ಯ ಸಿರಿ ಅಭಿನಂದನಾ ಗ್ರಂಥ ಬಿಡುಗಡೆ ಕಾರ್‍ಯಕ್ರಮ ಅ. ೧೯ರಂದು ನಡೆಯಲಿದೆ.
೧೦ರಂದು ಬೆಳಿಗ್ಗೆ ೧೦:೩೦ಕ್ಕೆ ರಂಗಮಂದಿರದಲ್ಲಿ ನಡೆಯುವ ಈ ಕಾರ್‍ಯಕ್ರಮವನ್ನು ಸಚಿವ ಕೆ. ಎಸ್. ಈಶ್ವರಪ್ಪ ಉದ್ಘಾಟಿಸುವರು. ಅಭಿನಂದನಾ ಗ್ರಂಥ ಅಮೂಲ್ಯ ಸಿರಿಯನ್ನು ಸಂಸದ ಬಿ ವೈ ರಾಘವೇಂದ್ರ ಬಿಡುಗಡೆ ಮಾಡುವರು. ಸಾನಿಧ್ಯವನ್ನು ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಬೆಜ್ಜವಳ್ಳಿ ವಿಶ್ವ ಸಂತೋಷ ಭಾರತೀ ಸ್ವಾಮೀಜಿ ವಹಿಸುವರು .
ಅತಿಥಿಗಳಾಗಿ ಶಾಸಕ ಕೆ. ಬಿ. ಅಶೋಕ ನಾಯ್ಕ, ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಸ್ಬುಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಉದ್ಯಮಿ ಮಾರುತಿರಾವ್ ಶಿಂಧೆ ಆಗಮಿಸುವರು, ಅಧ್ಯಕ್ಷತೆಯನ್ನು ಎಂಎಲ್‌ಸಿ ಎಸ್. ರುದ್ರೇಗೌಡ ವಹಿಸುವರು.

Ad Widget

Related posts

ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಪ್ರತಿನಿತ್ಯ ಸ್ಯಾನಿಟೈಸ್: ಮೇಯರ್

Malenadu Mirror Desk

ಅವೈಜ್ಞಾನಿಕ ಆಸ್ತಿ ತೆರಿಗೆ:ಕೆ.ವಿ.ವಸಂತಕುಮಾರ್

Malenadu Mirror Desk

ಕಾಗೋಡು ತಿಮ್ಮಪ್ಪರನ್ನು ಅವಿರೋಧ ಆಯ್ಕೆ ಮಾಡಲಿ, ಹಿರಿಯ ಜನನಾಯಕನಿಗೆ ಗೆಲುವಿನ ನಿವೃತ್ತಿ ಕೊಡಲಿ ಎಲ್ಲಾ ಪಕ್ಷಗಳಿಗೂ ಅಭಿಮಾನಿಗಳ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.